ವಿವಿಧಾಬಿಮುಖವಾಗಿ ಹರಡಿ ಪೋಲಾಗುತ್ತಿರುವ ಕೌಮಾರ್ಯದ ಶಕ್ತಿಗಳನ್ನು ಒಗ್ಗೂಡಿಸಿ ಒಂದು ನಿರ್ಧಿಷ್ಟ ಸದ್ಗುರಿಯತ್ತ ಹರಿಸುವ ವ್ಯವಸ್ಥಿತ ವಿಧಾನವಾಗಿದೆ ಯುವ ಸಂಘಟನೆ. ಇದೇ ಧ್ಯೇಯೋದ್ದೇಶದೊಂದಿಗೆ ಕೆಲವು ಸಮಾಜ ಸೇವಕರ ಮಾರ್ಗದರ್ಶನದಲ್ಲಿ ಕೊಡಂಗಾಯಿಯಲ್ಲಿ ಸ್ಥಾಪಿಸಲಾದ ಯುವಕರ ಸಂಘಟನೆಯಾಗಿದೆ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ (MCT ಕೊಡಂಗಾಯಿ). ಹದಿಹರೆಯದ ಮಕ್ಕಳ ಸಂಘಟನೆಯಾಗಿರುವ ಈ ನವತರುಣರ ನವ ಸಂಘಟನೆಯು ಸ್ಥಾಪನೆಯಾದ ಹೃಸ್ವ ಕಾಲಾವಧಿಯಲ್ಲೇ ತನ್ನ ವಿಶಿಷ್ಠ ಕಾರ್ಯಚಟುವಟಿಕೆಗಳಿಂದ ಗಮನಾರ್ಹವಾಗಿ ನಾಡಿನ ಜನರ ಶ್ಲಾಘನೆಗೆ ಪಾತ್ರವಾಗುತ್ತಿದೆ.

ನಾಡಿನ ಮಸ್ಜಿದ್ ಹಾಗೂ ಕಬರ್’ಸ್ತಾನದಲ್ಲಿ ಮತ್ತು ಕೊಡಂಗಾಯಿ ಜಂಕ್ಷನಲ್ಲೂ ಇವರು ನಡೆಸಿದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಊರಿನ ಹಲವಾರು ಸಹೋದರರ ಮನೆಯಂಗಳದಲ್ಲಿ ಶ್ರಮದಾನ ಕಾರ್ಯಕ್ರಮದಿಂದ ಈ ಹದಿಹರೆಯದ ಮಕ್ಕಳ ಸಾಂಘಿಕ ಉತ್ಸಾಹ, ಪಾರದರ್ಶಕ ಕ್ರಿಯಾಶೀಲತೆ , ಸೇವಾತತ್ಪರತೆ ಈಗಾಗಲೇ ಗುರುತಿಸಲ್ಪಟ್ಟಿದೆ.
ಹೀಗೆಯೇ ನವೋಲ್ಲಾಸದಿಂದ ಹಲವು ವಿಧ ಕಾರ್ಯಕ್ರಮಗಳ ಮೂಲಕ ಜನಾದರಣೆ ಗಳಿಸಿರುವ ಈ ಎಳೆಯರ ಎಳೆಪ್ರಾಯದ ಸಂಘಟನೆಯು ತನ್ನ ಯಶಸ್ವೀ ಮುನ್ನೇರಿಕೆಯ ಹೆಗ್ಗುರುತಾಗಿ ಗಿಡನೆಡುವ ಕಾರ್ಯಕ್ರಮವನ್ನು ಬಹಳ ನಾಜೂಕಾಗಿ ನಡೆಸಿ ನಾಡಿನಾದ್ಯಂತ ಪ್ರಶಂಶೆಗೆ ಪಾತ್ರವಾಗಿದೆ. ಹದಿಹರೆಯದ ಉತ್ಸಾಹವನ್ನು ಮೊಬೈಲ್ ಅದುಮುವುದರಲ್ಲೂ ವೀಡಿಯೋ ಗೇಮ್ ಗಳಲ್ಲೂ ಮೋರಿಗಳ ಕಟ್ಟೆಪುರಾಣಗಳಲ್ಲೂ ವ್ಯಯಿಸಿ ನಿಷ್ಪ್ರಯೋಜಕಗೊಳಿಸುವಂತಹ ಇಂದಿನ ಪರಿಸ್ಥಿತಿಯಲ್ಲಿ ಕೊಡಂಗಾಯಿಯ ಎಳೆ ಮಕ್ಕಳ ಕೌಮಾರ್ಯೋತ್ಸಾಹವನ್ನು ಸಮಾಜ ಮುಖಿಯಾಗಿ ಸದುಪಯೋಗವಾಗುವ ಹಾಗೆ ಸಾಂಘಿಕ ರೂಪು ನೀಡಿ ಹುರಿದುಂಬಿಸಿದವರ ದೀರ್ಘದೃಷ್ಟಿಗೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ.
ಜೂನ್ ಐದನೇ ತಾರೀಖಿನ ‘ವಿಶ್ವಪರಿಸರ ದಿನಾಚರಣೆ’ ಯ ಅಂಗವಾಗಿ ಈ ದಿನದಂದು ಗಣ್ಯರ ಉಪಸ್ಥಿತಿಯಲ್ಲಿ ಈ ಮಕ್ಕಳು ಕೊಡಂಗಾಯಿ ಜುಮಾ ಮಸ್ಜಿದ್ ವಠಾರದಲ್ಲಿ ಕೊಡಂಗಾಯಿ ಶಾಲಾ ಮೈದಾನ ಮೂಲೆಗಳಲ್ಲಿ ಹಾಗೂ ಕೊಡಂಗಾಯಿ ಅಂಗನವಾಡಿ ಕೇಂದ್ರ ಆವರಣದಲ್ಲಿಯೂ ಗಿಡಗಳನ್ನು ನೆಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜುಮಾ ಮಸ್ಜಿದ್ ಪದಾಧಿಕಾರಿಗಳಾದ ಸಿ.ಹೆಚ್ ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಖಾದರ್ ಬಿಕ್ನಾಜೆ, ಹಕೀಮ್ ಟಿಂಬರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹಮೀದ್ ಟಿ, ಸದಸ್ಯರಾದ ನಾರಾಯಣ ಭಟ್, ಹಾಗೂ ಶಾಲಾ ಶಿಕ್ಷಕಿ-ಶಿಕ್ಷಕರ ವೃಂದ, ಅಲ್ಲದೇ AYF(R)ಕೊಡಂಗಾಯಿ ಇದರ ಕಾರ್ಯದರ್ಶಿ ಮಜೀದ್ ಟಿ.ಎಮ್, KCL ವಕ್ತಾರ ಅಝರುದ್ದೀನ್ RCK, IMCC ಪ್ರಧಾನ ಕಾರ್ಯದರ್ಶಿ ರಫೀಕ್ ಪಿ, ಹಾಗೂ ಅಲಿ ಕೆ, ಶಬೀರ್ ಎಮ್, ಹಾರಿಸ್ ನ್ಯೂ ಇವರೆಲ್ಲರೂ ಈ ಮಕ್ಕಳ ಕಾರ್ಯಕ್ರಮಕ್ಕೆ ಸಾಥ್ ನೀಡಿ ಈ ಸದ್ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಗಿಡ ನೆಡುವುದು ಪುಣ್ಯ ಕಾರ್ಯ ಎಂದಾಗಿದೆ ಇಸ್ಲಾಮಿನ ಸಿದ್ಧಾಂತ. ಮರದಲ್ಲಾಗುವ ಪಲಗಳನ್ನು ಪಕ್ಷಿ ಮೃಗಗಳು ತಿನ್ನುವಾಗಲೂ ಕೂಡಾ ಆ ಮರ ನೆಟ್ಟವನಿಗೆ ಪುಣ್ಯ ಇದೆ ಎನ್ನುವ ಮೂಲಕ ವಿಶ್ವ ಪರಿಸರ ನೈರ್ಮಲ್ಯಕ್ಕೆ ಉದಾತ್ತ ಘೋಷಣೆ ಮೊಳಗಿಸಿದ ಮೊತ್ತ ಮೊದಲ ವ್ಯಕ್ತಿಯಾಗಿದ್ದಾರೆ ಪ್ರವಾದಿ ಮುಹಮ್ಮದರು.(ಸ.ಅ), ಅದೇ ರೀತಿ ಇಡೀ ವಿಶ್ವ ಅಂಗೀಕರಿಸುವ, ಆಧುನಿಕ ಜಗತ್ತಿನ ತುರ್ತು ಬೇಡಿಕೆಗಳಲ್ಲೊಂದಾದ, ಪರಿಶುದ್ಧ ಇಸ್ಲಾಮ್ ಕೂಡಾ ಪ್ರೋತ್ಸಾಹ ನೀಡಿದ ಮರಗಳನ್ನು ಬೆಳೆಸಿ ಪರಿಸರವನ್ನು ಹಸಿರಾಗಿಸಿ ಜೀವದ ಉಸಿರು ನೀಡುವ ಉದಾತ್ತ ಕಾರ್ಯವನ್ನು ಮಾಡಲು ತಮ್ಮ ಸಂಘಟನಾ ಶಕ್ತಿಯನ್ನು ಬಳಸಿದ ಸಂಘಟನಾಧ್ಯಕ್ಷರು ಸರಫುದ್ದೀನ್ ಕೆ, ಪ್ರಧಾನ ಕಾರ್ಯದರ್ಶಿ ರಮೀಝ್ ಎ.ಬಿ, ಸ್ವಚ್ಛತಾ ಉಸ್ತುವಾರಿ ಮುಸ್ತಾಫ ಡಿ.ಕೆ ಹಾಗೂ MCT ಕೊಡಂಗಾಯಿ ಸಂಘಟನೆ ಸರ್ವ ಸದಸ್ಯರಿಗೂ ತುಂಬು ಹೃದಯದ ಅಭಿನಂದನೆಗಳು