ಅಶ್ರಫ್ ಕಲ್ಲೇಗ ಅವರಿಗೆ ಪುತ್ತೂರು ಪೊಲೀಸರ ವರದಿಯ ಆಧಾರದಲ್ಲಿ ತಾಲೂಕು ದಂಡಾಧಿಕಾರಿಗಳು BNSS ಕಾಯ್ದೆ 130 ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗು ಜಾಮೀನು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ನೋಟೀಸು ನೀಡಿರುವುದು ತಿಳಿದು ಆಘಾತವಾಯ್ತು.
ಅಶ್ರಫ್ ಕಲ್ಲೇಗ ಪುತ್ತೂರು ಭಾಗದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿ. ಜನತಾದಳ, ಜಾತ್ಯಾತೀತ ಜನತಾ ದಳದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದವರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ರಾಜಕೀಯದ ಆಚೆಗೂ ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಮುಸ್ಲಿಮ್ ಯುವಜನ ಪರಿಷತ್ ಬ್ಯಾನರ್ ಅಡಿ ಪುತ್ತೂರು ತಾಲೂಕು ಮಟ್ಟದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲಿನ ಧಾಳಿ, ದೌರ್ಜನ್ಯಗಳ ವಿರುದ್ದ ಪ್ರಜಾಪ್ರಭುತ್ವ ನೆಲೆಗಟ್ಟಿನಲ್ಲಿ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದಾರೆ. ಜನ ಸಾಮಾನ್ಯರ ಪ್ರಶ್ನೆಗಳ ಮೇಲೆ ನಾವು ಹಮ್ಮಿಕೊಂಡ ಹಲವು ಪ್ರತಿಭಟನೆಗಳಲ್ಲಿಯೂ ಭಾಗಿ ಆಗಿದ್ದಾರೆ.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ, ಹಾಗು ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ನಾವು ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ, ಸಭೆ ನಡೆಸಿದಾಗ, ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಮೀನು ಅನ್ಯ ಉದ್ದೇಶಕ್ಕೆ ಬಳಸಲು ಮುಂದಾದಾಗ ನಾವು ನಡೆಸಿದ ಹೋರಾಟಕ್ಕೆ ಬಲ ತುಂಬಿದವರು ಅಶ್ರಫ್ ಕಲ್ಲೇಗ, ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ದೂರದ ಪುತ್ತೂರಿನಿಂದ ಬಂದು ಜೊತೆಯಾಗುತ್ತಿದ್ದರು.
ಇಂತಹ ಅಶ್ರಫ್ ಕಲ್ಲೇಗ ಯಾವತ್ತೂ ಶಾಂತಿ ಕದಡುವ ಕೆಲಸ ಮಾಡಿದವರಲ್ಲ. ಕ್ರಿಮಿನಲ್ ಹಿನ್ನಲೆಯೂ ಅವರಿಗಿಲ್ಲ. ರಾಜಕಾರಣದಲ್ಲಿ ಆಸ್ತಿ ಸಂಪತ್ತು ಮಾಡಿದವರೂ ಅಲ್ಲ. ಅಂತಹ ಅಶ್ರಫ್ ಕಲ್ಲೇಗ ಅವರನ್ನು ಕ್ರಿಮಿನಲ್ ನಂತೆ ಪರಿಗಣಿಸಿ BNSS ಕಾಯ್ಷೆ ಅಡಿ ನೋಟೀಸು ನೀಡಿರುವುದು, ಒಂದು ವರ್ಷದ ಅವಧಿಗೆ ಐದು ಲಕ್ಷ ರೂಪಾಯಿ ವೈಯುಕ್ತಿಕ ಬಾಂಡ್ ಹಾಗೂ ಓರ್ವ ಜಾಮೀನುದಾರನನ್ನು ಒದಗಿಸುವಂತೆ ಕೋರಿರುವುದು ಅಚ್ಚರಿ ತಂದಿದೆ, ಆಘಾತ ಉಂಟು ಮಾಡಿದೆ.
ಪುತ್ತೂರು ಪೊಲೀಸರ ಈ ನಡೆ ಖಂಡನೀಯ. ಅಶ್ರಫ್ ಮೇಲಿನ ನೋಟೀಸನ್ನು ಹಿಂಪಡೆಯಬೇಕು, ಜಿಲ್ಲೆಯ ಜನಪರ, ನಾಗರಿಕ ಶಕ್ತಿಗಳು ಅಶ್ರಫ್ ಕಲ್ಲೇಗ ಪರವಾಗಿ ಧ್ವನಿ ಎತ್ತಬೇಕು. ನಾವು ಅಶ್ರಫ್ ಕಲ್ಲೇಗ ಜೊತೆ ನಿಲ್ಲುತ್ತೇವೆ
ಮುನೀರ್ ಕಾಟಿಪಳ್ಳ







