janadhvani

Kannada Online News Paper

ನಂದಿ ಹೋದ ಚೇತನ ಶೈಖುನಾ ಅಬೂಬಕ್ಕರ್ ಹಾಜಿ ಚೊಕ್ಕಬೆಟ್ಟು ಉಸ್ತಾದ್

✍️ ಕೆ.ಹೆಚ್ ಬ್ರದರ್ಸ್ ಕರಾಯ

ಹೌದು ಶೈಖುನಾ ಅಬೂಬಕ್ಕರ್ ಹಾಜಿ ಉಸ್ತಾದ್ ಚೊಕ್ಕಬೆಟ್ಟು ಈ ನಾಮವನ್ನು ಕೇಳದವರು ಅತಿ ವಿರಳ.ಚೊಕ್ಕಬೆಟ್ಟು ಎಂದು ಕೇಳಿದಾಗ ಕೂಡಲೇ ನೆನಪಿಗೆ ಬರುವ ನಾಮ ಅಬೂಬಕ್ಕರ್ ಹಾಜಿಯವರದ್ದು. ಖ್ಯಾತ ಪಂಡಿತರೂ ಸೂಫಿವರ್ಯರೂ ಆದ ದೀವ್ ಬಂದಿನಿಂದ ಪೇಟ ಸ್ವೀಕರಿಸಿದ ವಿದ್ವಾಂಸ ಎಂದೇ ಖ್ಯಾತಿ ಪಡೆದ ಶೈಖುನಾ ಮಹ್ಮೂದ್ ಹಾಜಿ ಉಸ್ತಾದ್ ಪಾತೂರು ಎಂಬವರ ಪ್ರಥಮ ಪುತ್ರ.

ನಾಡಿನಲ್ಲಿ ನಡೆಯುವ ಎಲ್ಲಾ ದೀನೀ ಕಾರ್ಯಕ್ರಮಗಳಿಗೆ ಇವರ ಸಲಹೆ ಮತ್ತು ನೇತೃತ್ವ ಅತಿಮುಖ್ಯ. ಇಂದು ಇವರ ವಿಯೋಗದಿಂದ ನೀರವ ಮೌನದಲ್ಲಿ ಮುಳುಗಿದ್ದಾರೆ ನಾಡಿನ ಜನತೆ. ತಮ್ಮ ಚಿತ್ತದ ಒಂದು ಭಾಗವನ್ನು ಕಳೆದು ಅನಾಥವಾಗಿದ ಚೊಕ್ಕಬೆಟ್ಟು.

ಪ್ರಮುಖ ವಿದ್ವಾಂಸರೂ ಶ್ರೇಷ್ಠ ಸೂಫಿವರ್ಯರೂ ಆದ ಶೈಖುನಾ ಅಬೂಬಕ್ಕರ್ ಹಾಜಿ ಉಸ್ತಾದ್ ವಿಜ್ಞಾನ ಲೋಕದ ರವಿ ಎಂದೇ ಖ್ಯಾತಿ ಪಡೆದ ವಿಶ್ವೋತ್ತರ ವಿದ್ವಾಂಸ ಶೈಖುನಾ ಶಂಶುಲ್ ಉಲಮಾ ರವರ ಶಿಷ್ಯತ್ವವನ್ನು ಪಡೆಯಲೂ ಅವರಿಂದ ವಿಜ್ಞಾನವನ್ನು ಕಲಿಯಲು ಅದೃಷ್ಟ ಲಭಿಸಿದ ಮಹಾನ್ ವ್ಯಕ್ತಿ. ಇವರು ಪ್ರಾಚೀನ ಬಾಖವಿ ಗಳಲ್ಲಿ ಒಬ್ಬರು.ಆ ಕಾಲದಲ್ಲಿ ಬಾಖಿಯಾತು ಸ್ವಾಲಿಹೀನ್ ಕಾಲೇಜು ಗೆ ಹೋಗಿ ಬಾಖವಿ ಬಿರುದು ಪಡೆಯುವುದು ಅತ್ಯಂತ ಅಪೂರ್ವ ಗಮನಾರ್ಹವಾದ ವಿಷಯವಾಗಿತ್ತು. ಅಂತಹ ಸಂದರ್ಭದಲ್ಲಿ ವೆಳ್ಳೂರಿನ ಬಾಖಿಯಾತು ಸ್ವಾಲಿಹೀನ್ ಕಾಲೇಜು ಗೆ ಹೋಗಿ ಬಾಖವಿ ಬಿರುದುದಾರಿಯಾಗಿ ಹೊರಬಂದದ್ದು ಉಸ್ತಾದರ ಅಪಾರವಾದ ಜ್ಞಾನವನ್ನು ನಮಗೆ ಅರ್ಥೈಸಿಕೊಳ್ಳಬಹುದು.ನಹ್ವ್ ಸ್ವರ್ಫ್ ಗ್ರಂಥಗಳಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ ಇವರು ಸಾಧಾರಣವಾಗಿ ಸಾಮಾನ್ಯರಲ್ಲಿಯೂ ಉಲಮಾಗಳಲ್ಲಿಯೂ ಗ್ರಂಥಗಳು ಪಠಿಸುವಾಗ ಅರಿವಿಲ್ಲದೇ ಬರುವ ಅತೀ ಸಣ್ಣ ತಪ್ಪನ್ನು ಕೂಡಾ ಕಂಡುಹಿಡಿದು ಅದನ್ನು ಸರಿಪಡಿಸುವ ಸನ್ನಿವೇಶವನ್ನು ಸ್ರಷ್ಟಿಸುತ್ತಿದ್ದರು.

ಅದೇ ರೀತಿ ದೀನುಲ್ ಇಸ್ಲಾಮಿನ ವಿರೋಧವಾಗಿ ಯಾರೇ ತಪ್ಪು ಮಾಡಿದರೂ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಅನ್ಯರಾಗಲಿ ಅದನ್ನು ತೀವ್ರವಾಗಿ ಖಂಡಿಸುವ ವ್ಯಕ್ತಿತ್ವ ಅಬೂಬಕ್ಕರ್ ಹಾಜಿಯವರದ್ದು.ಅತೀ ಸೂಕ್ಷ್ಮತೆಯ ಜೀವನ ಸರಳತೆಯ ಜೀವನುದ್ದಕ್ಕೂ ಒಂದಿಷ್ಟೂ ಅಹಂಭಾವ ಬಾರದ ಅತ್ಯಂತ ತಾಳ್ಮೆಯ ಜೀವನ.ಜೀವನುದ್ದಕ್ಕೂ ಝಿಕ್ರ್,ಅವ್ರಾದ್,ಸ್ವಲಾತ್,ಇಬಾದತಿನಿಂದ ತನ್ಯ ಜೀವನವನ್ನು ಧನ್ಯಗೊಳಿಸಿದ ಆಬಿದ್. ಎಲ್ಲರನ್ನೂ ಪ್ರೀತಿಸುವ ನಗುಮುಖದ ಸ್ವಭಾವ ಶೈಲಿ.ಅತ್ಯಂತ ಗಾಂಭೀರ್ಯತೆ ಹೊಂದಿದ ಮುಖ.ನಾಳೆಯ ದಿನಕ್ಕೆ ಅಲ್ಲಾಹನಿದ್ದಾನೆ ಎನ್ನುತ್ತಾ ತನ್ನ ಸಂಪತ್ತಿನಲ್ಲಿ ನಾಳೆಯ ದಿನಕ್ಕೆ ಒಂದಿಷ್ಟು ಬಾಕಿ ಇಡದೇ ಜೀವನುದ್ದಕ್ಕೂ ದಾನವನ್ನು ನೀಡುತ್ತಾ ಕಾಲಕಳೆದ ಮಹಾವ್ಯಕ್ತಿತ್ವದ ಒಡೆಯ.

ಹಲವಾರು ಮೊಹಲ್ಲಾಗಳಲ್ಲಿ ಧಾರ್ಮಿಕ ಚೈತನ್ಯವನ್ನು ಮೂಡಿಸಿ ನಾಡಿನ ಅಭಿವೃದ್ಧಿಗಾಗಿ ಆಹೋರಾತ್ರಿ ದುಡಿದ ಮಹಾನರು ಹಲವಾರು ವಿದ್ವಾಂಸರನ್ನು ಈ ಸಮಾಜಕ್ಕೆ ಅರ್ಪಿಸಿದ್ದಾರೆ. ಕನ್ನಂಗಾರು,ಉದ್ಯಾವರ,ತಣ್ಣೀರುಬಾವಿ ,ಅಡ್ಡೂರು ,ಅಗ್ರಹಾರ ಇಂತಹ ಅನೇಕ ಮೊಹಲ್ಲಾಗಳಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯಸಮೂಹ ಸ್ರಷ್ಟಿಸಿದ್ದಾರೆ. ಅವರ ಶಿಷ್ಯಂದಿರು ಇಂದು ಮುದರ್ರಿಸರಾಗಿಯೂ ಖತೀಬರಾಗಿಯೂ ಹಲವಾರು ಮೊಹಲ್ಲಾಗಳಲ್ಲಿ ನೇತೃತ್ವವನ್ನು ನೀಡುತ್ತಿದ್ದಾರೆ.SKSSF ಜಿಲ್ಲಾ ಅಧ್ಯಕ್ಷರಾದ ಬಹುಮಾನ್ಯರಾದ ಕಿನ್ಯ ಅಮೀರ್ ತಂಙಳ್ ರವರ ಪಿತ್ರ ಮರ್ಹೂಂ ಕಿನ್ಯ ಜಲಾಲುದ್ದೀನ್ ತಂಙಳ್ ಇವರ ಶಿಷ್ಯಂದಿರಲ್ಲಿ ಓರ್ವರು.ಸಮಸ್ತ ಕರ್ನಾಟಕ ಜಂಇಯ್ಯತುಲ್ ಉಲಮಾದ ಉನ್ನತ ನಾಯಕರಲ್ಲಿ ಓರ್ವರಾದ ಕೆ.ಸಿ.ರೋಡ್ ಬಾಖವಿ ಉಸ್ತಾದ್ ಇವರ ಇಷ್ಟಶಿಷ್ಯರಲ್ಲಿ ಓರ್ವರು.ದೀರ್ಘ ಕಾಲ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಅಡ್ಯಾರ್ ಕಣ್ಮೂರಿನ ಅಬ್ದುಲ್ ಖಾದರ್ ಹಾಜಿ ಉಸ್ತಾದ್ ಕೂಡ ಇವರ ಶಿಷ್ಯರಲ್ಲಿ ಓರ್ವರು. ಅದೇ ರೀತಿ ಖ್ಯಾತ ವಾಗ್ಮಿ ಕಕ್ಕಿಂಜೆ ಅಬ್ದುರ್ರಶೀದ್ ಝೈನಿ ಕಾಮಿಲ್ ಅವರ ಪಿತ್ರರಾದ ಪ್ರಮುಖ ವಿದ್ವಾಂಸರೂ ಆದ ಮೂಸಾ ಮುಸ್ಲಿಯಾರ್ ಇವರ ಶಿಷ್ಯರಲ್ಲಿ ಓರ್ವರು. ಕಾಸರಗೋಡು ಕನ್ನಾಡಿಪಳ್ಳಿಯಲ್ಲಿ ದೀರ್ಘ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ ಅಬ್ದುಲ್ ಹಕೀಂ ಮೌಲವಿ ಕೂಡ ಇವರ ಶಿಷ್ಯರು. ಹೀಗೆ ಹಲವಾರು ಉಲಮಾ ಶಿರೋಮಣಿಗಳನ್ನು ಈ ಸಮೂಹಕ್ಕೆ ಸಮರ್ಪಿಸಿದ ಶ್ರೇಷ್ಠ ವ್ಯಕ್ತಿಯಾಗಿದ್ದರು ಶೈಖುನಾ ಅಬೂಬಕ್ಕರ್ ಹಾಜಿ ಚೊಕ್ಕಬೆಟ್ಟು.

ತನ್ನ ಜೀವನುದ್ದಕ್ಕೂ ದೀನೀ ಖಿದ್ಮತ್ಗಳಿಂದ ತೊಡಗಿದ ಅವರು ಶಂಶುಲ್ ಉಲಮಾ ರವರನ್ನು ಅತ್ಯಧಿಕವಾಗಿ ಪ್ರೀತಿಸುತ್ತಿದ್ದರು.ಶಂಶುಲ್ ಉಲಮಾ ಎಂಬ ನಾಮವು ಅವರನ್ನು ಆವೇಶಗೊಳಿಸುತ್ತಿತ್ತು .ಯಾವುದೇ ಕಾರ್ಯಕ್ಕೂ ಶಂಶುಲ್ ಉಲಮಾರವರನ್ನು ತವಸ್ಸುಲ್ ನಡೆಸುತ್ತಿದ್ದರು.ಅವಸಾನ ಕಾಲಗಟ್ಟದಲ್ಲಿ ಉಸ್ತಾದರಿಗೆ ನೆನಪುಶಕ್ತಿ ಕಡಿಮೆಯಾಗಿದ್ದರೂ ಶಂಶುಲ್ ಉಲಮಾರವರನ್ನು ನೆನಪಾದರೆ “ಎಂಡೆ ಶೈಖುನಾ ವಫಾತಾಯಿ ಪೋಯಲ್ಲೋ “ಎಂದು ಬಿಕ್ಕಿ ಬಿಕ್ಕಿ ಅತ್ತು ಅವರ ಮಗ್ಫಿರತ್ಗಾಗಿ ಪ್ರಾರ್ಥಿಸುತ್ತಿದ್ದರು.ಅದೇ ರೀತಿ ಸಮಸ್ತ ದ ಎಲ್ಲಾ ಉಲಮಾಗಳಲ್ಲಿ ಅತ್ಯಂತ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಸಮಸ್ತದ ಇಂದಿನ ಅಧ್ಯಕ್ಷರಾದ ಸೈಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ರವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.ಚೊಕ್ಕಬೆಟ್ಟು ಸಮಾರಂಭಕ್ಕೆ ಜಿಫ್ರಿ ತಂಙಳ್ ರವರು ಬಂದ ಸಮಯದಲ್ಲಿ ತಂಙಳ್ ಉಸ್ತಾದರು ಅಬೂಬಕ್ಕರ್ ಹಾಜಿಯವರನ್ನು ಅತ್ಯಂತ ಗೌರವದಲ್ಲಿ ಸಹವಸಿದ್ದು ಹಲವಾರು ಮಂದಿ ಕಂಡ ಚಿತ್ರಣವಾಗಿದೆ.ಜಿಫ್ರಿ ತಂಙಳ್ ರವರು ಎಂದಿಗೂ ಉಸ್ತಾದರ ಆರೋಗ್ಯ ವಿಚಾರಿಸುತ್ತಿದ್ದರು. ಅದೇ ರೀತಿ ಮರ್ಹೂಂ ಶೈಖುನಾ ಚೆರುಶೇರಿ ಉಸ್ತಾದ್,ಮರ್ಹೂಂ ಶೈಖುನಾ ಜಬ್ಬಾರ್ ಉಸ್ತಾದ್,ಮರ್ಹೂಂ ಶೈಖುನಾ ಕಾಸಿಂ ಉಸ್ತಾದ್ ಇವರೆಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ ವ್ಯಕ್ತಿಯಾಗಿದ್ದರು ಶೈಖುನಾ ಅಬೂಬಕ್ಕರ್ ಹಾಜಿ.
ಪ್ರಾರಂಭ ಕಾಲಘಟ್ಟದಲ್ಲಿ ಸಮಸ್ತಕ್ಕಾಗಿ ಆಹೋರಾತ್ರಿ ದುಡಿದ ವ್ಯಕ್ತಿಯಾಗಿದ್ದರು. ಸುರತ್ಕಲ್ ಪರಿಸರದಲ್ಲಿ ನೂತನವಾದಿಗಳ ಅಟ್ಟಹಾಸದ ಮಿತಿಮೀರಿದಾಗ ಇದನ್ನರಿತ ಉಸ್ತಾದರು ಅಂದಿನ ಮಹಾಪಂಡಿತರಾದ ಶೈಖುನಾ ಮರ್ಹೂಂ ನಾಟಿಗೆ ಉಸ್ತಾದರನ್ನು ಆಹ್ವಾನಿಸಿ ಸಂವಾದ ವನ್ನು ನಡೆಸಿ ನೂತನವಾದಿಗಳ ಅಟ್ಟಹಾಸಕ್ಕೆ ಪ್ರತ್ಯುತ್ತರ ನೀಡಿದ ಸನ್ನಿವೇಶವ ಎಂದಿಗೂ ಮರೆಯಲಾಗದು.ಹೀಗೆ ಜೀವನುದ್ದಕ್ಕೂ ದೀನುಲ್ ಇಸ್ಲಾಂ ಗಾಗಿ ಜೀವನವನ್ನು ಮೀಸಲಿಟ್ಟ ವ್ಯಕ್ತಿ ಶೈಖುನಾ ಅಬೂಬಕ್ಕರ್ ಹಾಜಿ ಚೊಕ್ಕಬೆಟ್ಟು.

ವಿದ್ವಾಂಸ ಪರಂಪರೆಯಲ್ಲಿ ಹುಟ್ಟಿದ ಶೈಖುನಾ ರವರ ಸಹೋದರರು ಕೂಡ ವಿದ್ವಾಂಸರಾಗಿರುತ್ತಾರೆ. ಮರ್ಹೂಂ ಪಾತೂರು ಉಮರ್ ಹಾಜಿ,ಉಸ್ಮಾನ್ ಮುಸ್ಲಿಯಾರ್ ಮಂಗಳೂರು,ಇಬ್ರಾಹಿಮ್ ಫೈಝಿ ಕಕ್ಕಿಂಜೆ,ಅಲಿ ಮುಸ್ಲಿಯಾರ್ ನಾಳ,ಮರ್ಹೂಂ ಉಸ್ಮಾನ್ ಮುಸ್ಲಿಯಾರ್. ಕಕ್ಕಿಂಜೆ .ಇಲ್ಮ್ ಅನ್ನು ಅಪಾರವಾಗಿ ಇಷ್ಟಪಟ್ಟ ಅವರು ತನ್ನ ಮಕ್ಕಳನ್ನೂ ವಿದ್ವಾಂಸರನ್ನಾಗಿ ಮಾಡಿ,ಹೆಣ್ಣು ಮಕ್ಕಳನ್ನು ವಿದ್ವಾಂಸರನ್ನೇ ಹುಡುಕಿ ಮದುವೆ ಮಾಡಿ ಕೊಟ್ಟು ತನ್ನ ಪರಂಪರೆಯನ್ನು ವಿದ್ವಾಂಸ ಕುಟುಂಬವಾಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾದರು.
ಪೋಕರ್ ಮಾಸ್ಟರ್ ಎಂದೇ ಖ್ಯಾತಿ ಪಡೆದ ಅಬ್ದುಲ್ಲಾ ಮಾಸ್ಟರ್ ಕ್ರಷ್ಣಾಪುರ ರವರ ಪ್ರಥಮ ಪುತ್ರಿ ನಫೀಸಾ ಹಜ್ಜುಮ್ಮಾ ಧರ್ಮಪತ್ನಿ, ಸುಪುತ್ರರಾದ ಬಹುಮಾನ್ಯರಾದ ಬಶೀರ್ ಬಾಖವಿ ಉಸ್ತಾದ್ ಅಪಾರ ಶಿಷ್ಯ ಸಮೂಹವನ್ನು ಹೊಂದಿದ ವ್ಯಕ್ತಿ.ತನ್ನ ತಂದೆಯ ಹಾದಿಯಲ್ಲೇ ಇಂದೂ ಕೂಡ ಚೆರುವತ್ತ್ತೂರು ನಲ್ಲಿ ದರ್ಸ್ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಎರಡನೆಯ ಪುತ್ರರಾದ ಮರ್ಹೂಂ ಆದಂ ಫೈಝಿ ಉಸ್ತಾದ್ ಅನೇಕ ಮೊಹಲ್ಲಾಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ ಸರಳ ಸೌಮ್ಯತೆಯ ವ್ಯಕ್ತಿ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅಲ್ಲಾಹು ಅವರ ಖಬ್ರ್ ವಿಶಾಲಗೊಳಿಸಲಿ..ಆಮೀನ್..
ಅದೇ ರೀತಿ ಮೂರನೇಯ ಪುತ್ರ ಅಬ್ದುಲ್ ಲತೀಫ್ , 4 ನೇಯ ಪುತ್ರ ಶರೀಫ್ ದಾರಿಮಿ ಅಲ್ ಹೈತಮಿ.ನಂದಿ ದಾರುಸ್ಸಲಾಂ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ, ಅನೇಕ ಮೊಹಲ್ಲಾಗಳಲ್ಲಿ ನೇತೃತ್ವವನ್ನು ನೀಡುತ್ತಾ ಇದೀಗ ಮುಲ್ಕಿ ಕೊಲ್ನಾಡಿನಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ .ಇನ್ನು ತನ್ನ ಹೆಣ್ಣುಮಕ್ಕಳ ಪತಿಯಂದಿರು ಎಲ್ಲರು ವಿದ್ವಾಂಸರೇ. ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ , ಅಲ್ ಅಝ್ಹರಿಯ ಮಂಗಳೂರು ಇದರ ಪ್ರಾಂಶುಪಾಲರಾದ, ಶೈಖುನಾ ಕೆ.ಎಂ ಹೈದರ್ ಮದನಿ ಕರಾಯ ಉಸ್ತಾದರು ಹಿರಿಯರು. ವಾಮಂಜೂರು ಜುಮಾ ಮಸೀದಿಯಲ್ಲಿ ದೀರ್ಘ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ ಅಬ್ದುಲ್ ಕರೀಂ ಮದನಿ ಉಸ್ತಾದ್,ಚಾಪ್ಪಳ ಸವಣೂರಿನಲ್ಲಿ ದೀರ್ಘ ಕಾಲ ಖತೀಬರಾಗಿ ಸೇವೆ ಸಲ್ಲಿಸಿ ಇದೀಗ ಸಾಲೆತ್ತೂರು ಜುಮಾ ಮಸೀದಿಯ ಖತೀಬರಾದ ಅಬ್ದುಲ್ಲ ಮದನಿ ಪಾತೂರು ,ಕಾಸರಗೋಡು ಚೆಂಗಳ ಮಸೀದಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಖಾದರ್ ಫೈಝಿ,ಅದೇ ರೀತಿ ಸಂಘಟನಾ ಚತುರರಾದ ನಂದಾವರ ಜುಮಾ ಮಸೀದಿ ಯ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಇವರೆಲ್ಲರೂ ಶೈಖುನಾ ರವರ ಮಕ್ಕಳ ಪತಿಯಂದಿರು.ಹೀಗೆ ಉನ್ನತ ಕುಟುಂಬದಲ್ಲಿ ಜನಿಸಿ ತನ್ನ ಪರಂಪರೆಯನ್ನು ದೀನೀ ರಂಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದ ಶೈಖುನಾ ರವರ ಜೀವನ ಸಾರ್ಥಕ.
ಇವೆಲ್ಲದರ ಪರಿಣಾಮದಿಂದ ಉಸ್ತಾದರನ್ನು ಇಷ್ಟಪಡುವವರು ಸಹಸ್ರಾರು ಮಂದಿ.ಹಲವಾರು ಮಾನಸಿಕ,ಶಾರೀರಿಕ ಸಮಸ್ಯೆಗಳಿರುವ ವ್ಯಕ್ತಿಗಳು ಉಸ್ತಾದರ ಬಳಿ ಬರುತ್ತಿದ್ದರು.ಉಸ್ತಾದರ ಬಾಯಿಮಂತ್ರದ ಫಲವಾಗಿ ಅದೆಷ್ಟೋ ಮಂದಿಗೆ ಯಾವ ವೈದ್ಯಕೀಯ ಚಿಕಿತ್ಸೆ ಫಲಿಸದ ವ್ಯಕ್ತಿಗಳಿಗೆ ಶಮನ ಲಭಿಸಿದ ಚರಿತ್ರೆ ಅದೆಷ್ಟೋ ಇದೆ.
ಅಂತೆಯೇ ಶೈಖುನಾರ ಇಚ್ಛೆಯಂತೇ ತನ್ನ ಪ್ರಾರ್ಥನೆ ಯ ಫಲದಂತೇ ರಮಳಾನ್ ಮಾಸದಲ್ಲಿ ಲೈಲತುಲ್ ಖದ್ರ್ ನ್ನು ನಿರೀಕ್ಷಿಸಲ್ಪಡುವ 21 ನೆಯ ದಿನದಂದು ಅಲ್ಲಾಹನ ಅನುಲಂಘನೀಯ ವಿಧಿಗೆ ಓಗೊಟ್ಟು ಇಹಲೋಕ ತ್ಯಜಿಸಿದರು.

*ಹೀಗೆ ಬರೆಯಲು ಹೋದರೆ ತೀರದು ಅವರ ಗುಣಗಾನ. ಹೀಗೆ ತನ್ನ ಜೀವನವನ್ನೇ ದೀನುಲ್ ಇಸ್ಲಾಂಗಾಗಿ ಮುಡಿಪಾಗಿರಿಸಿದ ಮಹಾ ಪುರುಷ ಬಹು ಅಬೂಬಕ್ಕರ್ ಹಾಜಿ ಚೊಕ್ಕಬೆಟ್ಟು .ಇವರ ವಿಯೋಗವು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ .ಅಲ್ಲಾಹು ನಾಳೆ ಅವರೊಂದಿಗೆ ನಮ್ಮನ್ನು ಸ್ವರ್ಗದಲ್ಲಿ ಒಗ್ಗೂಡಿಸಲಿ ಆಮೀನ್.*

error: Content is protected !! Not allowed copy content from janadhvani.com