janadhvani

Kannada Online News Paper

ರಾಮನಗರ: ಹಿರಿಯ ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ(68) ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ನಸುಕಿನ 2 ಗಂಟೆಗೆ ಮೃತಪಟ್ಟಿದ್ದಾರೆ.

ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂಲತಃ ಪುತ್ತೂರಿನ ಕೆಯ್ಯೂರಿನವರಾದ ಎನ್.ಮುತ್ತಪ್ಪ ರೈಯವರು ಪ್ರಸ್ತುತ ಬೆಂಗಳೂರಿನ ಬಿಡದಿಯಲ್ಲಿ ವಾಸವಿದ್ದರು.

ಜಯ ಕರ್ನಾಟಕ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವೆಗೆ ಇಳಿದಿದ್ದರು‌. ಬುಧವಾರದಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿ ಇದ್ದಾರೆ. ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಇರುವ ಅವರ ಸ್ವಗೃಹದಲ್ಲಿ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮುತ್ತಪ್ಪ ರೈ ಸಾಗಿ ಬಂದ ಹಾದಿ

ತುಳು ಭಾಷಿಕ ಬಂಟರ ಕುಟುಂಬದ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ನೆಟ್ಟಲ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂದು ಕುಖ್ಯಾತರಾಗಿದ್ದರು.

ಮೊದಲ ಪತ್ನಿ ರೇಖಾ ಸಿಂಗಪುರದಲ್ಲಿ ನಿಧನರಾಗಿದ್ದರು. ಪುತ್ರರಾದ ರಾಖಿ ಮತ್ತು ರಿಕ್ಕಿ ಇದ್ದಾರೆ. ತುಳು ಸಿನಿಮಾ ‘ಕಂಚಿಲ್ದ ಬಾಲೆ’ಯಲ್ಲಿ ಮುತ್ತಪ್ಪ ರೈ ಕಾಣಿಸಿಕೊಂಡಿದ್ದರು. ‘ಜಯ ಕರ್ನಾಟಕ’ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ನ್ಯಾಯಾಲಯಗಳಲ್ಲಿ ಮುತ್ತಪ್ಪ ರೈ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಭದ್ರತಾ ಸಂಸ್ಥೆಗಳು ವಿಫಲವಾದವು. ಆದರೆ ಇಂದಿಗೂ ಸಮಾಜ ಅವರನ್ನು ಭೂಗತ ಲೋಕದ ಮಾಜಿ ಡಾನ್ ಎಂದೇ ಗುರುತಿಸುತ್ತದೆ.

ಮುತ್ತಪ್ಪ ರೈ ವಿರುದ್ಧ ಪೊಲೀಸರು ದಂಡ ಸಂಹಿತೆ 302 (ಕೊಲೆ) ಮತ್ತು 120ಬಿ (ಸಂಚು) ಅನ್ವಯ 8 ಪ್ರಕರಣಗಳನ್ನು ದಾಖಲಿಸಿದ್ದರು. 2001ರಲ್ಲಿ ನಡೆದಿದ್ದ ಬೆಂಗಳೂರಿನ ರಿಯಲ್‌ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಕೊಲೆ ಪ್ರಕರಣದಲ್ಲಿಯೂ ಮುತ್ತಪ್ಪ ರೈ ಅವರ ಹೆಸರು ಕೇಳಿ ಬಂದಿತ್ತು.

2002ರಲ್ಲಿ ದುಬೈ ಪೊಲೀಸರು ಮುತ್ತಪ್ಪ ರೈ ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ಸಿಬಿಐ, ರಾ, ಐಬಿ ಮತ್ತು ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಅವರ ವಿಚಾರಣೆ ನಡೆಸಿದ್ದರು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ರೈ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಲಿಲ್ಲ.

ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆ, ರಕ್ಷಣೆಗಾಗಿ ಹಣ ವಸೂಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗಿನ ನಂಟು ಸೇರಿದಂತೆ ಹತ್ತಾರು ಆರೋಪಗಳು ಮುತ್ತಪ್ಪ ರೈ ಮೇಲಿದ್ದವು. ಮುತ್ತಪ್ಪ ರೈ ಜೀವನ ಆಧರಿಸಿದ ಚಲನಚಿತ್ರವೊಂದನ್ನು (ರೈ) ರಾಮ್‌ ಗೋಪಾಲ್ ವರ್ಮಾ ಸಿದ್ಧಪಡಿಸಲು ಯತ್ನಿಸಿದ್ದರು. ಆದರೆ ಈ ಚಿತ್ರ ಬಿಡುಗಡೆಯಾಗಲಿಲ್ಲ.

error: Content is protected !! Not allowed copy content from janadhvani.com