janadhvani

Kannada Online News Paper

ಸೌದಿಯಿಂದ ಭಾರತಕ್ಕೆ ತೆರಳುವವರಿಗೆ ರಾಯಭಾರಿಯ ನಿರ್ದೇಶ

ರಿಯಾದ್: ಸೌದಿ ಅರೇಬಿಯಾದಿಂದ ಊರಿಗೆ ತೆರಳಲು ಈವರೆಗೆ 60,000 ಕ್ಕೂ ಮಿಕ್ಕ ಅರ್ಜಿಗಳು ಬಂದಿವೆ ಎಂದು ಭಾರತೀಯ ರಾಯಭಾರಿ ಡಾ.ಔಸಾಫ್ ಸಯೀದ್ ತಿಳಿಸಿದ್ದಾರೆ.

ವೈದ್ಯಕೀಯ ಸಹಾಯ ಅಗತ್ಯವಿರುವವರು ಮತ್ತು ಗರ್ಭಿಣಿಯರಿಗೆ ಮೊದಲ ಆದ್ಯತೆ.ಮೊದಲ ವಿಮಾನ ಕೋಝಿಕೋಡ್‌ಗೆ ಹಾರಾಟ ನಡೆಸಲಿದ್ದು, ಶುಕ್ರವಾರದಿಂದ ಪ್ರಾರಂಭವಾಗಲಿವೆ. ಪ್ರಯಾಣ ಕ್ಷೇತ್ರಕ್ಕೆ ಅನುಗುಣವಾಗಿ ಟಿಕೆಟ್‌ಗಳ ಬೆಲೆ 1500 ರಿಯಾಲ್ ವರೆಗೆ ಇರಲಿದ್ದು, ಮೊದಲ ವಿಮಾನವು ರಿಯಾದ್‌ನಿಂದ ಕೋಝಿಕೋಡ್‌ಗೆ ಶುಕ್ರವಾರ ಮಧ್ಯಾಹ್ನ 12.35 ಕ್ಕೆ ಹೊರಡಲಿದೆ.

ವಿಮಾನಗಳನ್ನು ಈ ತಿಂಗಳ 14 ರ ವೆರೆಗೆ ನಿಗದಿಪಡಿಸಲಾಗಿದೆ. ಸೌದಿ ಅರೇಬಿಯಾದಿಂದ, ಕೋಝಿಕೋಡ್‌ಗೆ ಎರಡು, ದೆಹಲಿಗೆ ಒಂದು ಮತ್ತು ಕೊಚ್ಚಿಗೆ ಎರಡು ವಿಮಾನಯಾನ ಇರಲಿದೆ. ಹೆಚ್ಚಿನ ಕ್ಷೇತ್ರಗಳಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ ಎಂದು ರಾಯಭಾರಿ ಹೇಳಿದ್ದಾರೆ. ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ವಿಮಾನಯಾನ ಕಚೇರಿಯಿಂದ ತೆಗೆದುಕೊಳ್ಳಬೇಕು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ.

ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಸಕ್ತ ರಿಯಾದ್, ದಮ್ಮಾಮ್ ಮತ್ತು ಜಿದ್ದಾ ವಿಮಾನ ನಿಲ್ದಾಣಗಳಿಂದ ಸೇವೆ ದೊರಕಲಿದೆ. ಪ್ರಸಕ್ತ ಪ್ರಾಂತ್ಯಗಳ ನಡುವೆ ಪ್ರಯಾಣ ನಿಷೇಧವಿದೆ. ಆ ಕಾರಣದಿಂದಾಗಿ ವಿಮಾನ ನಿಲ್ದಾಣಗಳು ಇರುವ ಪ್ರಾಂತ್ಯಗಳಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ದೂರದ ಪ್ರದೇಶಗಳಿಗೂ ವಿಮಾನಯಾನಗಳ ಬಗ್ಗೆ ಪರಿಗಣಿಸಲಾಗುತ್ತಿದೆ. ಇತರ ಪ್ರಾಂತ್ಯಗಳಿಗೆ ಪ್ರಯಾಣದ ಕ್ರಮೀಕರಣವನ್ನು ನಂತರ ಘೋಷಿಸಲಾಗುವುದು. ವಿವಿಧ ಕಂಪನಿಗಳಿಂದ ವಿಮಾನಗಳ ಚಾರ್ಟರ್ಗಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಕೇಂದ್ರವು ನಿರ್ಧಾರ ತೆಗೆದುಕೊಳ್ಳಲಿದೆ.

ಊರಿಗೆ ಹೋಗುವವರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿದ್ದು, ಸೌದಿ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಯಾಣಿಕರ ವೈದ್ಯಕೀಯ ಪರೀಕ್ಷೆ ಪೂರ್ಣಗೊಳ್ಳಲಿದೆ. ಈ ಬಗ್ಗೆ ದೂತಾವಾಸವು ಪ್ರಯಾಣಿಕರಿಗೆ ಮಾಹಿತಿ ನೀಡಲಿದೆ.

ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ನಂತರ ನೆಗಟೀವ್ ಆದವರಿಗೂ ಪ್ರಯಾಣಕ್ಕೆ ಅನುಮತಿಯಿದೆ.ಇದಕ್ಕಾಗಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕು. ಮೊದಲ ವಿಮಾನದಲ್ಲಿ ಪ್ರಯಾಣಿಸುವವರ ಪೈಕಿ ಅರ್ಧದಷ್ಟು ಪ್ರಯಾಣಿಕರು ಗರ್ಭಿಣಿಯರು ಸೇರಿದಂತೆ ವೈದ್ಯಕೀಯ ಉದ್ದೇಶಗಳಿಗಾಗಿ ತೆರಳುವವರಾಗಿದ್ದಾರೆ.

ಗರ್ಭಿಣಿಯರು ಪ್ರಮಾಣಿತ ವೈದ್ಯರ ಫಿಟ್‌ನೆಸ್ ಪ್ರಮಾಣಪತ್ರವನ್ನು ಸಹ ಸಿದ್ಧಪಡಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳಿರುವ ಜನರು ಪ್ರಯಾಣಿಸಲು ಸಾಧ್ಯ ಎನ್ನುವ ಬಗ್ಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ನೀಡುವ ಅಗತ್ಯವಿದೆ. ಸೌದಿ ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸಿ ಕೋವಿಡ್ ತಪಾಸಣೆಯ ವಿಧಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ರಾಯಭಾರಿ ಹೇಳಿದರು.

ಗಡೀಪಾರು ಕೇಂದ್ರದಲ್ಲಿ 300 ಮಂದಿಯಿದ್ದು, ಇವರಿಗೆ ಸೌದಿಯು ಅನುಮತಿ ನೀಡಿದರೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಸೌದಿಯಲ್ಲಿನ ಭಾರತೀಯ ರಾಯಭಾರಿ ತಿಳಿಸಿದ್ದಾರೆ. ಔದಾ ಪೋರ್ಟಲ್‌ನಿಂದ ಅಬ್ಸೀರ್ ಮೂಲಕ ಭಾರತಕ್ಕೆ ಪ್ರಯಾಣಿಸುವವರ ಬಗ್ಗೆ ಮಾಹಿತಿ ದೊರೆತ ಕೂಡಲೇ ರಾಯಭಾರ ಕಚೇರಿಯು ಸರಕಾರದಿಂದಿಗೆ ಸಮಾಲೋಚಿಸಿ ವ್ಯವಸ್ಥೆ ಕಲ್ಪಿಸಲಿದೆ.

ಮಾಹಿತಿಗಳಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಅಥವಾ ಇ-ಮೇಲ್ ಅನ್ನು ಸಂಪರ್ಕಿಸಬಹುದು:

ಭಾರತದ ರಾಯಭಾರ ಕಚೇರಿ, ರಿಯಾದ್,

COVID-19 ಸಹಾಯವಾಣಿ ಸಂಖ್ಯೆ: +966-546103992

ಇಮೇಲ್: covid19indianembassy@gmail.com

ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ಜಿದ್ದಾ,

COVID-19 ಸಹಾಯವಾಣಿ ಸಂಖ್ಯೆ: +966-556122301 / 8002440003

ಇಮೇಲ್: hoc.jeddah@mea.gov.in / conscw@mea.gov.in

error: Content is protected !! Not allowed copy content from janadhvani.com