janadhvani

Kannada Online News Paper

ವಲಸಿಗರನ್ನು ಕೊಂಡೊಯ್ಯಲು ನಿರಾಕರಿಸುವ ದೇಶಗಳ ವಿರುದ್ಧ ಕಠಿಣ ಕ್ರಮ-ಯುಎಇ

ದುಬೈ: ಊರಿಗೆ ವಾಪಸಾತಿ ಬಯಸಿರುವ ವಲಸಿಗರನ್ನು ಕೊಂಡೊಯ್ಯದ ದೇಶಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಯುಎಇ ಮುಂದಾಗಿದೆ. ಅಂತಹ ದೇಶಗಳೊಂದಿಗಿನ ಸಹಕಾರ ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಮರುಚಿಂತನೆ ನಡೆಸುವುದಾಗಿ ಯುಎಇ ಎಚ್ಚರಿಸಿದೆ. ಮಾಹಿತಿಯನ್ನು ಅಧಿಕೃತ ಸುದ್ದಿ ಸಂಸ್ಥೆಯಾದ ‘ವಾಂ’ ಬಿಡುಗಡೆ ಮಾಡಿದೆ.ಇದು ಭಾರತ ಸಹಿತವಿರುವ ದೇಶಗಳು ತುರ್ತು ನಿರ್ಧಾರ ತೆಗೆದು ಕೊಳ್ಳಲು  ಸೂಚನೆಯಾಗಿದೆ.

ಭಾರತ ಸೇರಿದಂತೆ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ ಯುನೈಟೆಡ್ ಅರಬ್ ಎಮಿರೇಟ್ಸ್ ಈ ಪ್ರಕಟನೆ ನೀಡಿದೆ. ಮುಂದೆ ಕಾರ್ಮಿಕರ ನೇಮಕಾತಿಯಲ್ಲಿ ಕಠಿಣ ನಿಯಂತ್ರಣ ಮತ್ತು ಕೋಟಾ ವ್ಯವಸ್ಥೆಯ ತಿದ್ದುಪಡಿ ಮುಂತಾದವುಗಳನ್ನು ಯುಎಇ ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ವರದಿ ಹೇಳುತ್ತದೆ.ಆಯಾ ದೇಶಗಳೊಂದಿಗಿನ ಕಾರ್ಮಿಕ ಸಚಿವಾಲಯದ ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆಯೂ ಯೋಚಿಸುತ್ತಿದೆ.

ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ನೌಕರರನ್ನು ಕಡಿತಗೊಳಿಸುವ, ರಜೆ ನೀಡುವ, ಅಗತ್ಯವಿದ್ದಲ್ಲಿ ವಜಾಗೊಳಿಸುವ ಹಕ್ಕನ್ನು ಯುಎಇ, ಖಾಸಗಿ ವಲಯಕ್ಕೆ ನೀಡಿದೆ.ಈ ನಿಟ್ಟಿನಲ್ಲಿ ಸ್ವದೇಶಕ್ಕೆ ಮರಳುವುದು ಅನಿವಾರ್ಯವಾಗಿದ್ದರೂ ತನ್ನ ದೇಶದ ನಾಗರಿಕರನ್ನು ಹಿಂದಕ್ಕೆ ಪಡೆಯುವಲ್ಲಿ ಕೆಲವು ದೇಶಗಳು ನಿರಾಕರಿಸಿದ ಕಾರಣದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಯುಎಇ ನಿರ್ಧರಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ವದೇಶಕ್ಕೆ ಮರಳಲು ಬಯಸುವ ಕಾರ್ಮಿಕರನ್ನು ವಾಪಸ್ ಕರೆಸುವುದು ಆಯಾ ದೇಶಗಳ ಜವಾಬ್ದಾರಿಯಾಗಿದೆ. ವಿಮಾನಯಾನ ಸೇರಿದಂತೆ ಯುಎಇಯ ಹಲವಾರು ಇಲಾಖೆಗಳು ಮಾನವೀಯ ನೆರವು ನೀಡಲು ಒಪ್ಪಿಕೊಂಡಿವೆ. ಬಿಕ್ಕಟ್ಟಿನ ಹಿನ್ನಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಮರಳಲು ಬಯಸುವವರಿಗೆ ಸೇವೆಗಳನ್ನು ನಿರ್ವಹಿಸಲು ಎಮಿರೇಟ್ಸ್ ವಿಮಾನಯಾನ ಸಂಸ್ಥೆಗೆ ಅನುಮತಿ ನೀಡಲಾಗಿದೆ.

ಗಲ್ಫ್​ ದೇಶಗಳಲ್ಲಿ 33 ಲಕ್ಷಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ. ಅಲ್ಲಿನ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.30 ಭಾರತೀಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಕೇರಳದವರೇ ಆಗಿದ್ದಾರೆ. ನಂತರದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದವರಿದ್ದಾರೆ.

ವಿದೇಶಕ್ಕೆ ತೆರಳುವವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದ್ದರೆ, ನಮ್ಮ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ತಮ್ಮ ದೇಶಗಳಿಗೆ ತೆರಳುವವರು ಭಯಪಡಬೇಕಿಲ್ಲ. ಭಾರತವೂ ಸೇರಿ ಯುಎಇಯಲ್ಲಿರುವ ಎಲ್ಲ ದೇಶಗಳ ರಾಯಭಾರ ಕಚೇರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಯುಎಇಯ ಭಾರತದ ರಾಯಭಾರಿ ಅಬ್ದುಲ್​ ರಹ್ಮಾನ್​ ಅಲ್​ ಬನ್ನಾ ತಿಳಿಸಿದ್ದಾರೆ.

ಲಾಕ್​​ಡೌನ್​ ಹಿನ್ನೆಲೆಯಲ್ಲಿ ಭಾರತದಲ್ಲಿ ವಿದೇಶಿ ವಿಮಾನಗಳ ಹಾರಾಟ ನಿಷೇಧಿಸಿರುವ ಕಾರಣ ಪ್ರವಾಸಕ್ಕೆ ಬಂದವರು ಇಲ್ಲಿಯೇ ಉಳಿದುಕೊಂಡಿದ್ದಾರೆ. ಅವರೆಲ್ಲರೂ ಪ್ರಯಾಣಕ್ಕೆ ಯೋಗ್ಯರಾಗಿದ್ದಾರೆ ಎಂದು ಬನ್ನಾ ಹೇಳಿದ್ದಾರೆ. ಆದಷ್ಟು ಬೇಗ ತಮ್ಮವರನ್ನು ಕರೆಯಿಸಿಕೊಳ್ಳಲು ಮುಂದಾಗುವಂತೆ ತಿಳಿಸಿದ್ದಾರೆ.ಆದರೆ, ಪ್ರಯಾಣಿಕರ ವಿಮಾನ ಸೇವೆ ಪುನರಾರಂಭಗೊಳ್ಳುವವರೆಗೂ ಭಾರತೀಯರನ್ನು ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ ಎಂದು ಭಾರತ ಹೇಳಿದೆ.

ವಲಸಿಗರನ್ನು ಸದ್ಯಕ್ಕೆ ಮರಳಿ ತರಲು ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್

error: Content is protected !! Not allowed copy content from janadhvani.com