janadhvani

Kannada Online News Paper

ಕೊರೋನಾ ಹರಡುವ ಭೀತಿ: ರಾಜ್ಯದಲ್ಲಿ ಒಂದು ವಾರ ಅಘೋಷಿತ ಬಂದ್

ಬೆಂಗಳೂರು: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಮಾರಣಾಂತಿಕ ಕೊರೋನಾಗೆ ರಾಜ್ಯದಲ್ಲಿ ಈಗಾಗಲೇ 6 ಜನ ಸೋಂಕಿತರಾಗಿದ್ದು, ಕಲಬುರ್ಗಿ ವೃದ್ಧ ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್ವೈ, ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನಸಂದಣಿ ಸೇರುವ ಮಾಲ್ ಹಾಗೂ ಥಿಯೇಟರ್ಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡುವಂತೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ನುರಿತರ ಅಭಿಪ್ರಾಯ ಪಡೆದು ಈ ನಿರ್ಣಯ ಕೈಗೊಳ್ಳಲಾಗಿದ್ದು, ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಸಾಧ್ಯವಾದರೆ ಪ್ರವಾಸ ರದ್ದು ಮಾಡುವುದು ಒಳ್ಳೆಯದು ಎಂದ ಬಿಎಸ್ವೈ, ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಆದರೆ, ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಜೊತೆಗೆ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸದಂತೆ ಕೂಡ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಾರ ರಾಜ್ಯದಲ್ಲಿ ಏನೇನು ಇರುವುದಿಲ್ಲ? ಏನೇನು ಮಾಡುವಂತಿಲ್ಲ?

1) ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಒಂದು ವಾರಗಳ ಕಾಲ ಬಂದ್

2) ವಿದ್ಯಾರ್ಥಿಗಳು ಒಟ್ಟಿ ಸೇರುವಂತಿಲ್ಲ, ಯಾರೂ ಒಂದೆಡೆ ಗುಂಪುಗೂಡುವಂತಿಲ್ಲ.

3) ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

4) ನಾಳೆಯಿಂದ ಒಂದು ವಾರ ಕಾಲ ಮಾಲ್ , ಸಿನಿಮಾ ಥಿಯೇಟರ್, ಪಬ್ ಅಂಡ್ ನೈಟ್ ಕ್ಲಬ್ಗಳಿಗೂ ಬಂದ್.

5) ಉಪನ್ಯಾಸ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮ, ಮದುವೆ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಒಂದು ವಾರ ನಡೆಸುವಂತಿಲ್ಲ.

6) ದೇವರ ಜಾತ್ರೆ, ಮನೆ ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೂ ನಿಷೇಧ.

6) ಐಟಿಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ.

7) ಅಂತಾರಾಷ್ಟ್ರೀಯ ವೀಸಾಗಳಿಗೆ ಏಪ್ರಿಲ್.15ರ ವರೆಗೆ ನಿರ್ಬಂಧ.

8) ಯಾರೂ ಗುಂಪು ಸೇರಬಾರದು, ಯಾರ ಜೊತೆಯೂ ಕೈ ಕುಲುಕಬಾರದು.

9) ಎಲ್ಲಾ ರೀತಿಯ ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಿಗೆ ನಿಷೇಧ.

10) ಸರ್ಕಾರದ ಎಲ್ಲಾ ಕಾರ್ಯಕ್ರಮಗಳೂ ಒಂದು ವಾರಗಳ ಕಾಲ ಬಂದ್.

ಏನೇನಿರುತ್ತೆ? ಏನೇನು ಮಾಡಬಹುದು?

1) ಖಾಸಗಿ ಮತ್ತು ಸರ್ಕಾರ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

2) ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ.

3) ಬಹುಮುಖ್ಯ ಪರೀಕ್ಷೆಗಳನ್ನು ಮಾತ್ರ ಯಥಾಸ್ಥಿತಿಯಂತೆ ನಡೆಸಲಾಗುತ್ತದೆ.

4)ಕಡಿಮೆ ಸಂಖ್ಯೆಯ ಜನರನ್ನು ಆಹ್ವಾನಿಸಿ ಸರಳ ಮದುವೆಗಳಿಗೆ ಮಾತ್ರ ಅವಕಾಶ.

error: Content is protected !! Not allowed copy content from janadhvani.com