janadhvani

Kannada Online News Paper

ರಾಜ್ಯದಲ್ಲಿ ನಾಲ್ವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ- ಆರೋಗ್ಯ ಸಚಿವ

ಬೆಂಗಳೂರು ,ಮಾ.10: ಜಗತ್ತಿನಾದ್ಯಂತ ತಲ್ಲಣ ಮೂಡಿಸುತ್ತಿರುವ ಕೊರೋನಾ ವೈರಸ್​ ಸೋಂಕು ರಾಜ್ಯದ ನಾಲ್ವರಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ದೃಢಪಡಿಸಿದ್ದಾರೆ. ಅಂದರೆ ಮೂರು ಹೊಸ ಸೋಂಕಿತರು ಇಂದು ಪತ್ತೆಯಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುವುದಾಗಿ ತಿಳಿದು ಬಂದಿದೆ.

ನಿನ್ನೆ ಅಮೆರಿಕದಿಂದ ಮರಳಿದ್ದ ವೈಟ್​ಫೀಲ್ಡ್​ ಮೂಲದ ಟೆಕ್ಕಿಯಲ್ಲಿ ಕೊರೋನಾ ಸೋಂಕು ಇರುವುದು ದೃಢ ಪಟ್ಟಿದ್ದು, ಅವರಿಗೆ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಇಂದು ಮತ್ತೆ ಮೂವರಿಗೆ ಈ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತರನ್ನು ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಜನರು ಮುಂಜಾಗೃತ ಕ್ರಮವಾಗಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.ಮೂವರಿಗೆ ಸೋಂಕಿರುವ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಪ್ರಕಟಣೆ ಹೊರಡಿಸಿದ್ದು, ಇದರ ಬೆನ್ನಲ್ಲೇ ಸಚಿವರು ಈ ಕುರಿತು ದೃಢಪಡಿಸಿದ್ದಾರೆ.

ಉನ್ನತ ಮಟ್ಟದ ಸಭೆ: ನಾಲ್ವರಿಗೆ ಸೋಂಕಿರುವುದು ದೃಢಪಟ್ಟ ಹಿನ್ನೆಲೆ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಸಲಾಗುವುದು. ಆರೋಗ್ಯ ಸಚಿವ ಬಿ ಶ್ರೀರಾಮುಲು, ಉನ್ನತ ಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಸಂಜೆ ನಾಲ್ಕು ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದರು.

ಗುಲ್ಬರ್ಗದಲ್ಲಿ ವ್ಯಕ್ತಿಗೆ ಸೋಂಕು ಶಂಕೆ :ಗುಲ್ಬರ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕೆ ಸೋಂಕು ತಗುಲಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.

error: Content is protected !! Not allowed copy content from janadhvani.com