janadhvani

Kannada Online News Paper

ಈ ವರ್ಷದಿಂದ ಸ್ಮಾರ್ಟ್ ಹಜ್ ಯೋಜನೆ ವಿಸ್ತರಣೆ- ಹಜ್ ಉಮ್ರಾ ಸಚಿವಾಲಯ

ರಿಯಾದ್: ಈ ವರ್ಷದಿಂದ ಸ್ಮಾರ್ಟ್ ಹಜ್ ಯೋಜನೆಯನ್ನು ವಿಸ್ತರಿಸುವುದಾಗಿ ಹಜ್ ಉಮ್ರಾ ಸಚಿವಾಲಯ ಪ್ರಕಟಿಸಿದೆ. ಯಾತ್ರಿಕರು ದೇಶಕ್ಕೆ ತಲುಪಿದ ಬಳಿಕ ಮರಳುವ ವರೆಗೂ ತಾಂತ್ರಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ. ಪ್ರಾಯವಾದ ಯಾತ್ರಾರ್ಥಿಗಳು ಕಾಣೆಯಾದಲ್ಲಿ ಅವರನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಒಳಗೊಂಡಂತೆ ಈ ಬಾರಿ ಇದನ್ನು ವ್ಯಾಪಕವಾಗಿ ಜಾರಿಗೆ ತರಲಾಗುತ್ತದೆ.

ಹಜ್ ಸಮಯದಲ್ಲಿ ಯಾತ್ರಾರ್ಥಿಗಳಿಗೆ ಒದಗಿಸುವ ಸೇವೆಗಳನ್ನು ಹೆಚ್ಚಿಸುವುದು ಹೊಸ ಉಪಕ್ರಮವಾಗಿದ್ದು, ಈ ಮೊದಲು ಸ್ಮಾರ್ಟ್ ಹಜ್ ಎಂದು ಪ್ರಾರಂಭಿಸಲಾಗಿದ್ದ ಈ ಯೋಜನೆಯನ್ನು ಹೆಚ್ಚಿನವರಿಗೆ ವಿಸ್ತರಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಪ್ರಾರಂಭಿಸಲಾದ ಯೋಜನೆಯ ಮೊದಲ ಹಂತವು ಭಾರಿ ಯಶಸ್ಸನ್ನು ಕಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಯಾತ್ರಾರ್ಥಿಗಳಿಗೆ ಪ್ರಯಾಣ ಮತ್ತು ಸಾರಿಗೆ ಸೇವೆಗಳನ್ನು ಸುಲಭಗೊಳಿಸಲು ಈ ಯೋಜನೆ ಸಹಾಯ ಮಾಡಿದೆ. ಯಾತ್ರೆ ಹೊರಟ ದೇಶದಿಂದಲೇ ವಲಸೆ(ಇಮಿಗ್ರೇಶನ್) ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವುದು, ಪ್ರತಿ ತೀರ್ಥಯಾತ್ರಿಗೆ ಟ್ರ್ಯಾಕಿಂಗ್ ವಾಚ್ ಸ್ಥಾಪಿಸುವುದು ಮತ್ತು ಪೋರ್ಟಲ್ ಮೂಲಕ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದು ಇದರಲ್ಲಿ ಸೇರಿದೆ. ಈ ಮೂಲಕ ಯಾತ್ರಾರ್ಥಿಗಳಿಗೆ ಉತ್ತಮ ಸೇವೆಗಳನ್ನು ನೀಡಲಾಗುತ್ತದೆ.

ಈ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲು ಹಜ್ ಉಮ್ರಾ ಸಚಿವಾಲಯವು ಅಂತರರಾಷ್ಟ್ರೀಯ ಕಂಪನಿಗಳು ಮತ್ತು ತಾಂತ್ರಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಮಿನಾದಲ್ಲಿ ಪಾಲ್ಗೊಳ್ಳುವವರಿಗೆ ಸಂಪೂರ್ಣ ಕಾರ್ಯವನ್ನು ಪೂರ್ಣಗೊಳಿಸಲು ಸುಲಭವಾಗುವಂತೆ ಈ ಬಾರಿ ವಿಶೇಷ ತಂತ್ರಜ್ಞಾನ ಜಾರಿಗೊಳಿಸಲಾಗುತ್ತದೆ. ಯಾವುದೇ ವಿಪರೀತ ದಟ್ಟಣೆ ಇಲ್ಲದೆ ಆಚರಣೆಗಳನ್ನು ಪೂರ್ಣಗೊಳಿಸುವುದು ಈ ಮೂಲಕ ಸಾಧ್ಯವಾಗಲಿದೆ.

error: Content is protected !! Not allowed copy content from janadhvani.com