janadhvani

Kannada Online News Paper

ಬೆಂಗಳೂರು, ಜ.22: ರಾಜ್ಯ ವಕ್ಫ್ ಬೋರ್ಡ್‌ಗೆ ಚುನಾವಣೆ ನಡೆದು 10 ತಿಂಗಳು ಕಳೆದ ಬಳಿಕ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಮುತವಲ್ಲಿ ವಿಭಾಗದಲ್ಲಿ ಚುನಾಯಿತರಾಗಿದ್ದ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಗೆಲುವಿನ ನಗೆ ಬೀರಿದ್ದಾರೆ.

ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ 10 ಮಂದಿ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು, ಯೂಸುಫ್ ಅವರಿಗೆ ಆರು ಮತಗಳು ಹಾಗೂ ಶಾಫಿ ಸಅದಿಯವರಿಗೆ ನಾಲ್ಕು ಮತಗಳು ಬಂದಿವೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಹಮ್ಮದ್ ಯೂಸುಫ್, ವಕ್ಫ್ ಬೋರ್ಡ್ ಅನ್ನು ಇಡೀ ದೇಶದಲ್ಲಿ ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದರು. ರಾಜ್ಯದಲ್ಲಿರುವ ಎಲ್ಲ ವಕ್ಫ್ ಆಸ್ತಿಗಳ ಅಭಿವೃದ್ಧಿ ಹಾಗೂ ಮುಸ್ಲಿಮ್ ಸಮುದಾಯದ ಕಲ್ಯಾಣಕ್ಕಾಗಿ ಒತ್ತು ನೀಡಲು ಸದಸ್ಯರ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚನೆ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ಬೋರ್ಡ್‌ನ ಆಡಳಿತಾಧಿಕಾರಿಯೂ ಆಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್, ಬೋರ್ಡ್‌ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಒದಗಿಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬೋರ್ಡ್‌ನ ಮೊದಲ ಸಭೆ ನಡೆಯಲಿದೆ. ಆನಂತರ, ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಆಬ್ದುಲ್ ಅಝೀಝ್ ಕೃಷ್ಣಾಪುರ ನೇಮಕ

ಮಂಗಳೂರು, ಜ.22: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕೃಷ್ಣಾಪುರ ನೇಮಕಗೊಂಡಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಅಝೀಝ್ ಅವರು, ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್‌ನ ಹಾಗೂ ಸುರತ್ಕಲ್ ಹಳೆ ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟದ ಮಾಜಿ ಅಧ್ಯಕ್ಷರಾಗಿದ್ದಾರೆ.

ಸಲಹಾ ಸಮಿತಿಯ ಉಪಾಧ್ಯಕ್ಷರಾಗಿ ಎ.ಕೆ.ಜಮಾಲುದ್ದೀನ್, ಟಿ.ಎ.ಶಾನವಾಝ್ ಹಾಗೂ ಸದಸ್ಯರಾಗಿ ಮುತ್ತಲಿಬ್, ಎಂ.ರಝಾಕ್, ಸಂಶುದ್ದೀನ್, ಝುಬೈರ್, ಇಬ್ರಾಹೀಂ, ಮುಹಮ್ಮದ್ ಶರೀಫ್, ಎಂ.ಸಲೀಂ, ಅರ್ಶದ್ ಸಬಹಿ, ಅಬ್ದುಲ್ಲ ಕುಂಞಿ ನೆಲ್ಕಡ್ಕ, ಇಸ್ಮಾಯೀಲ್ ಕಾನವು, ಮುಹಮ್ಮದ್ ಅಶ್ರಫ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

error: Content is protected !!
%d bloggers like this: