ಎನ್‌‌ಪಿಆರ್ ತಾಯಿ, ಎನ್‌ಆರ್‌ಸಿ ಮಗು: ಸಂವಾದ ಕಾರ್ಯಕ್ರಮದಲ್ಲಿ-ಶಿವಸುಂದರ್

ಬಿಸಿರೋಡ್ ; ಕೇಂದ್ರ ಸರ್ಕಾರವು ಜಾರಿಗೊಳಿಸಲು ಬಯಸಿದ ಎನ್‌ಆರ್‌ಸಿ, ಸಿಎಎ,ಎನ್‌ಪಿ‌ಆರ್ ಸಾಂವಿಧಾನಿಕ ವಿರೋಧಿ ಕಾಯಿದೆಯಾಗಿದ್ದು, ಸಂವಿಧಾನದ 14 ನೇ ವಿಧಿಯಲ್ಲಿ ಯಾವುದೇ ವ್ಯಕ್ತಿಗೆ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬಾರದೆಂದು ಸ್ಪಷ್ಟವಾಗಿ ಹೇಳಲಾಗಿದೆ.

ವ್ಯಕ್ತಿ ಎಂದರೆ ಯಾವುದೇ ದೇಶದ ಪೌರ ಎಂದರ್ಥವಲ್ಲ. ವಿದೇಶಿಯರಾದರೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಈ ದೇಶದ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಖ್ಯಾತ ಅಂಕಣಗಾರ, ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ ಹೇಳಿದರು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆದ ಏನಿದು ಎನ್‌ಆರ್‌ಸಿ? ಮಾಹಿತಿ ಶಿಬಿರ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಗಳಿಗೆ 2003 ರಲ್ಲೇ ಅಡಿಪಾಯ ಹಾಕಲಾಗಿತ್ತು; ಅದರ ನಂತರ ಬಂದ ಜಾತ್ಯತೀತ ಸರಕಾರವು ಆ ಬಗ್ಗೆ ಯಾಕೆ ಜಾಣನಿದ್ರೆಗೆ ಜಾರಿತ್ತು? ಎಂದು ಪ್ರಶ್ನಿಸಿದರು.

ನ್ಯಾಯಾಂಗವೂ ವಿಶ್ವಾಸಾರ್ಹತೆಯನ್ನು ಕಳೆದು ಕೊಳ್ಳುತ್ತಿರುವ ಈ ದಿನಗಳಲ್ಲಿ ದೇಶದ ಜನತೆ ನ್ಯಾಯ ಸಿಗುವವರೆಗೂ ಬೀದಿಯಿಂದ ಕದಲಬಾರದು. ಶಾಂತಿಯುತ ಅಸಹಾಕರ ಚಳುವಳಿ ಮುಂದುವರಿಯಬೇಕು.

ಎನ್‌‌ಪಿ‌ಆರ್ ತಾಯಿ; ಅದರ ಮಗು ಎನ್‌ಆರ್‌ಸಿ: ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸಲು ಯಾವ ಸಂಸತ್ತು ಅಥವಾ ಸುಪ್ರೀಮ್ ಕೋರ್ಟ್ ಗೂ ಅವಕಾಶ ಕೊಡಬಾರದು ಎಂದು ಹೇಳಿದರು.

ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮುಹಮ್ಮದ್ ಅಲಿ ತುರ್ಕಳಿಕೆ, ನಿರ್ದಿಷ್ಟ ಸಮುದಾಯದ ವಿರುದ್ಧ ನಡೆಯುವ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಯದ ವಾತಾವರಣದಲ್ಲೇ ಬದುಕುವಂತೆ ನೋಡಿಕೊಳ್ಳುವ ಷಡ್ಯಂತ್ರಗಳು ಹೆಚ್ಚಾಗುತ್ತಿದೆ. ಇದರ ವಿರುದ್ಧ ಭಾರತಕ್ಕೆ ಭಾರತವೇ ಹೋರಾಟಕ್ಕೆ ಧುಮುಕಿದ್ದು ಆಶಾದಾಯಕ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹೊರತಂದ “ನಿಷ್ಕಳಂಕ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರಗಳು” ಎಂಬ ಒಂದು ಲಕ್ಷ ಎನ್‌ಆರ್‌ಸಿ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಹೀಂ ಸ‌ಅದಿ ಕತ್ತರ್, ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಜಿಲ್ಲಾ ಉಪಾಧ್ಯಕ್ಷರಾದ ಕೆಎಂಎಚ್ ಝುಹ್ರಿ ಕೊಂಬಾಳಿ, ತೌಸೀಫ್ ಸ‌ಅದಿ ಹರೇಕಳ, ಸಲೀಂ ಹಾಜಿ ಬೈರಿಕಟ್ಟೆ, ಕಾರ್ಯದರ್ಶಿಗಳಾದ ರಶೀದ್ ಹಾಜಿ ವಗ್ಗ, ಜಮಾಲ್ ಸಖಾಫಿ, ರಫೀಕ್ ಕಾಟಿಪಳ್ಳ, ಇನ್ನಿತರ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!