janadhvani

Kannada Online News Paper

ಪೌರತ್ವ ತಿದ್ದುಪಡಿ ಕಾಯ್ದೆ,ದೇಶದಲ್ಲಿ ಧಾರ್ಮಿಕ ಯುದ್ಧಕ್ಕೆ ಆಸ್ಪದ-ಶಿವಸೇನೆ

ಮುಂಬೈ : ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ , ಪೌರತ್ವ ತಿದ್ದುಪಡೆ ಕಾಯ್ದೆಯ ಮೂಲಕ ಕೇಂದ್ರ ಸರಕಾರ ಹಿಂದೂಗಳು ಹಾಗೂ ಮುಸ್ಲಿಮರ ‘ಅಗೋಚರ ವಿಭಜನೆಗೆ’ ಯತ್ನಿಸುತ್ತಿದೆ ಎಂದು ಬರೆದಿದೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಹಿನ್ನೆಲೆಯಲ್ಲಿ ಸೇನೆಯ ಈ ಹೇಳಿಕೆ ಮಹತ್ವ ಪಡೆದಿದೆ. ಈ ರೀತಿಯಾಗಿ ಹಿಂದೂ ಅಕ್ರಮ ವಲಸಿಗರನ್ನು ಆಯ್ದು ಅವರಿಗೆ ಮಾತ್ರ ಪೌರತ್ವ ನೀಡುವುದು ದೇಶದಲ್ಲಿ ಧಾರ್ಮಿಕ ಯುದ್ಧಕ್ಕೆ ಆಸ್ಪದ ನೀಡುವ ಆತಂಕವನ್ನೂ ಸೇನೆ ವ್ಯಕ್ತಪಡಿಸಿದೆ.

ಈ ಮಸೂದೆಯ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವುದು ದೇಶದ ಹಿತಾಸಕ್ತಿಯಲಿಲ್ಲ ಎಂದು ಹೇಳಿದ ಶಿವಸೇನೆ, ”ಈ ದೇಶದಲ್ಲಿ ಈಗ ಸಮಸ್ಯೆಗಳಿಗೆ ಕೊರತೆಯಿಲ್ಲದೇ ಇರುವಾಗ ಈ ಮಸೂದೆ ಮಂಡನೆಯಂತಹ ಕ್ರಮಗಳ ಮೂಲಕ ಹೊಸ ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೇವೆ, ಈ ಮಸೂದೆಯ ವಿಚಾರದಲ್ಲಿ ಕೇಂದ್ರವು ಹಿಂದೂಗಳು ಹಾಗೂ ಮುಸ್ಲಿಮರ ಅಗೋಚರ ವಿಭಜನೆ ಮಾಡಿದಂತೆ ಕಾಣಿಸುತ್ತದೆ” ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಈಶಾನ್ಯ ಭಾರತದ ಹೆಚ್ಚಿನ ರಾಜ್ಯಗಳು ಹಾಗೂ ಬಿಜೆಪಿಯು ಜೆಡಿಯು ಜತೆ ಮೈತ್ರಿ ಮಾಡಿಕೊಂಡಿರುವ ಬಿಹಾರ ಕೂಡ ಈ ಮಸೂದೆಯನ್ನು ವಿರೋಧಿಸುತ್ತಿದೆ ಎಂದು ಲೋಕಸಭೆಯಲ್ಲಿ 18 ಸದಸ್ಯರ ಬಲ ಹೊಂದಿರುವ ಶಿವಸೇನೆ ಹೇಳಿದೆ.

ಪಾಕಿಸ್ತಾನ ವಿರುದ್ಧ ಕಠಿಣ ನಿಲುವು ತಳೆದಂತೆ ಹಿಂದೂಗಳ ಮೇಲೆ ದೌರ್ಜನ್ಯವೆಸಗುವ ಕೆಲ ನೆರೆಯ ರಾಷ್ಟ್ರಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗುವಂತೆಯೂ ಶಿವಸೇನೆ ಪ್ರಧಾನಿಯನ್ನು ಆಗ್ರಹಿಸಿದೆ.

error: Content is protected !! Not allowed copy content from janadhvani.com