ಪೌರತ್ವ ಕಾನೂನು ತಿದ್ದುಪಡಿ ಅಸಂವಿಧಾನಿಕ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಕೋಝಿಕ್ಕೋಡ್: ವಲಸಿಗರ ಪೈಕಿ ಮುಸ್ಲಿಮೇತರರಿಗೆ ಮಾತ್ರ ಪೌರತ್ವದ ಹಕ್ಕನ್ನು ನೀಡುವ ಕೇಂದ್ರ ಸರಕಾರದ ನಿಲುವು ಏಕಪಕ್ಷೀಯವಾಗಿದ್ದು, ಸಂವಿಧಾನ ತನ್ನ ಪ್ರಜೆಗಳಿಗೆ ನೀಡುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಮತ್ತು ಕೇರಳ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ. ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ನಾಯಕರು ಈ ಬಗ್ಗೆ ತಕ್ಷಣ ಪ್ರಧಾನಿಯನ್ನು ಭೇಟಿಮಾಡಲಿದ್ದಾರೆ ಮತ್ತು ಮಸೂದೆಯ ವಿರುದ್ಧ ಕಾನೂನು ಕ್ರಮವಾಗಿ ನ್ಯಾಯಾಲಯವನ್ನು ಸಮೀಪಿಸಲಾಗುವುದು ಎಂದು ಕಾಂತಪುರಂ ಹೇಳಿದರು.

ಸಂಸತ್ತಿನಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ನಾಗರಿಕ ಹಕ್ಕುಗಳ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡುವ ಬಗ್ಗೆ ಒತ್ತಿಹೇಳುತ್ತದೆ. ಇದು ಸಂವಿಧಾನದ 14 ನೇ ಪರಿಚ್ಛೇದದ ಸ್ಪಷ್ಟ ಉಲ್ಲಘನೆಯಾಗಿದ್ದು, ಎಲ್ಲರಿಗೂ ಸಮಾನತೆ ಎಂಬ ನಿಬಂಧನೆಗೆ ವಿರುದ್ಧವಾಗಿದೆ, ಅದು ಭಾರತದ ಸಂವಿಧಾನಕ್ಕೆ ಆಧಾರವಾಗಿರುವ ಜಾತ್ಯತೀತ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಭಾರತೀಯ ಮುಸ್ಲಿಂ ಸಮುದಾಯವನ್ನು, ವಿಶೇಷವಾಗಿ ಮುಸ್ಲಿಮರನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿದೆ.

ಈ ನವಜಾತಿ ಕ್ರಮದಲ್ಲಿ ಮುಸ್ಲಿಮರು ಹೊಸ ದಲಿತರಾಗಲಿದ್ದಾರೆ. ಈ ದೇಶದಲ್ಲಿ ಜನಿಸಿದ ಮತ್ತು ದಶಕಗಳಿಂದ ಈ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯವನ್ನು ಹೊರಹಾಕುವ ಉದ್ದೇಶವನ್ನು ಇಂತಹ ಕ್ರಮಗಳು ಹೊಂದಿದೆ ಎಂಬುದು ಭಯಾನಕವಾಗಿದೆ. ಜಾತ್ಯತೀತ ಪೌರತ್ವ ಶಾಸನವು ದೇಶದ ಜಾತ್ಯತೀತ ಮೌಲ್ಯಗಳು ಮತ್ತು ಸಾಂವಿಧಾನಿಕ ಕಟ್ಟುಪಾಡುಗಳಿಗೆ ಹೊಂದಿಕೆಯಾಗುವುದಿಲ್ಲ.

ಎಲ್ಲಾ ವಲಸಿಗರನ್ನು ಮನುಷ್ಯರಂತೆ ಪರಿಗಣಿಸುವ ಬದಲು, ಧರ್ಮದ ನೆಪದಲ್ಲಿ ಅವರ ವಿರುದ್ಧ ತಾರತಮ್ಯ ಮಾಡುವುದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ. ಇದು ದೇಶದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಸಲಾದ ನೇರ ಹಲ್ಲೆಯಾಗಿದ್ದು, ಅವರು ಈಗಾಗಲೇ ವಿವಿಧ ರೀತಿಯ ಹಿಂಸಾಚಾರಗಳಿಗೆ ಒಳಗಾಗಿರುವವರಾಗಿದ್ದಾರೆ. ಕೋಮು ಹಿತಾಸಕ್ತಿ ಮಸೂದೆಯನ್ನು ವಿರೋಧಿಸಲು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಜಕೀಯ ಚಳುವಳಿಗಳು ಒಂದಾಗಬೇಕು.

ಆಡಳಿತದ ತೀವ್ರ ಆರ್ಥಿಕ ಬಿಕ್ಕಟ್ಟಿನ ಗಮನವನ್ನು ಬೇರೆಡೆ ಸೆಳೆಯಲು ಮತ್ತು ದೇಶದಲ್ಲಿ ಕೋಮು ಭಿನ್ನತೆ ಸೃಷ್ಟಿಸಿ ಆಡಳಿತವನ್ನು ಕಾಪಾಡಿಕೊಳ್ಳಲು ನಡೆಸುವ  ಪ್ರಯತ್ನಗಳನ್ನು ಈ ದೇಶದ ನಾಗರಿಕ ಸಮಾಜ ಗುರುತಿಸಬೇಕು. ದೇಶದ ಪ್ರಮುಖ ಪಕ್ಷಗಳು ನಾಗರಿಕರು ಸುರಕ್ಷಿತವಾಗಿ ಬದುಕುವಂತೆ ನೋಡಿಕೊಳ್ಳಲು ಸರ್ವ ಭಿನ್ನತೆಗಳನ್ನು ಬದಿಗೊತ್ತಿ ಒಗ್ಗೂಡಬೇಕೆಂದು ಕಾಂತಪುರಂ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!