janadhvani

Kannada Online News Paper

ಮಹಾರಾಷ್ಟ್ರ: ‘ಮಹಾ ವಿಕಾಸ ಅಘಾಡಿ’ ಅಧಿಕಾರಕ್ಕೆ – ನಾಳೆ ಉದ್ಧವ್ ಠಾಕ್ರೆ ಪ್ರಮಾಣವಚನ

ಮುಂಬೈ, ನ.27: ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಮುನ್ನವೇ ಬಿಜೆಪಿ ಹಿಂದೆ ಸರಿದಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 79 ಗಂಟೆಗಳಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ಬಿಜೆಪಿ ವಿರುದ್ಧ ಮಿತ್ರಪಕ್ಷಗಳಾದ ಎನ್​ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್​ ಗೆಲುವಿನ ನಗು ಬೀರಿವೆ. ಮಂಗಳವಾರ ರಾತ್ರಿ ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿ ಅವರನ್ನು ಭೇಟಿಯಾಗಿರುವ ಶಿವಸೇನೆ ನಾಯಕ ಉದ್ಧವ್​ ಠಾಕ್ರೆ ಸರ್ಕಾರ ರಚಿಸಲು ಸಿದ್ಧರಿರುವುದಾಗಿ ಪತ್ರ ನೀಡಿದ್ದಾರೆ.

ಮಂಗಳವಾರ ಖಾಸಗಿ ಹೋಟೆಲ್​​ನಲ್ಲಿ ಸಭೆ ಸೇರಿದ್ದ ಎನ್​ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಉದ್ಧವ್ ಠಾಕ್ರೆ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಿವೆ. ಉದ್ಧವ್ ಠಾಕ್ರೆ ಅವರೇ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಆಡಳಿತ ನೀಡಲಿದ್ದಾರೆ ಎಂದು ಎನ್​ಸಿಪಿ ಮುಖಂಡ ಜಯಂತ್​​ ಪಟೇಲ್​ ಹೇಳಿದ್ದಾರೆ. ಈ ಮೂರೂ ಪಕ್ಷಗಳ ನಾಯಕರು ನಿನ್ನೆ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ನಾಳೆ ಉದ್ಧವ್​ ಠಾಕ್ರೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ‘ಮಹಾ ವಿಕಾಸ ಅಘಾಡಿ’ ಮೈತ್ರಿಕೂಟದ ನಾಯಕನಾಗಿ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿದ್ದು, ನಾಳೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಠಾಕ್ರೆ ಶಿವಾಜಿ ಪಾರ್ಕ್​ನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಖಾತರಿಯಾಗಿದೆ. ಇದರ ಜೊತೆಗೆ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್​ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಎನ್​ಸಿಪಿ ನಾಯಕ ಜಯಂತ್ ಪಟೇಲ್ ಹಾಗೂ ಕಾಂಗ್ರೆಸ್​ ನಾಯಕ ಬಾಳಾಸಾಹೇಬ್ ಥೋರಾತ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿವೆ.


ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!