ನವದೆಹಲಿ (ಜುಲೈ.25); ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳುತ್ತಿದ್ದಂತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ, ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿ ಸಿಎಂ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ರಾಜಕೀಯ ತಜ್ಞರ ಎಲ್ಲಾ ಊಹೆಗಳನ್ನೂ ಉಲ್ಟಾ ಹೊಡೆಸಿರುವ ಬಿಜೆಪಿ ಪಕ್ಷದ ಕೇಂದ್ರ ನಾಯಕರು ಸರ್ಕಾರ ರಚನೆ ಹಾಗೂ ಬಿಎಸ್ವೈ ಪಟ್ಟಾಭಿಷೇಕಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಅಲ್ಲದೆ, ರಾಜ್ಯದಿಂದ ದೆಹಲಿಗೆ ತೆರಳಿರುವ ಬಿಜೆಪಿ ನಿಯೋಗದ ಕೈಗೂ ಸಿಗದೆ ನಿರಾಸೆ ಮೂಡಿಸಿದ್ದಾರೆ.
ಮಂಗಳವಾರದ ಅಧಿವೇಶನಲ್ಲಿ ನಡೆದ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಸೋಲನುಭವಿಸಿದ ಮೈತ್ರಿ ಸರ್ಕಾರದ ನಾಯಕ ಕುಮಾರಸ್ವಾಮಿ ಅಂದೇ ರಾಜ್ಯಪಾಲರ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಬಹುತೇಕ ಗುರುವಾರ ಸಂಜೆಯ ಒಳಗಾಗಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಡ್ಡಿಯ ಮಹತ್ವಾಕಾಂಕ್ಷೆಗೆ ಅಡ್ಡಗಾಲು ಹಾಕಿದ್ದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.
ಮಂಗಳವಾರ ಮೈತ್ರಿ ಸರ್ಕಾರ ಪತನವಾದಾಗಿನಿಂದ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಆದೇಶಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಆದರೆ, ಈವರೆಗೆ ಸರ್ಕಾರ ರಚಿಸುವ ಕುರಿತು ಅಲ್ಲಿಂದ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಪ್ರಸ್ತುತ ರಾಜ್ಯದ ನೈಜ ಪರಿಸ್ಥಿತಿಯನ್ನು ಕೇಂದ್ರದ ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಗುರುವಾರ ಬೆಳಗ್ಗೆಯೇ ರಾಜ್ಯ ನಾಯಕರ ನಿಯೋಗ ದೆಹಲಿಗೆ ತೆರಳಿದೆ.
ಆದರೆ, ಪಕ್ಷದ ಹಿರಿಯ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತ್ರ ದೆಹಲಿಗೆ ಬರುವುದು ಬೇಡ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆಯೇ ಸೂಚನೆ ನೀಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಹಿರಿಯ ಶಾಸಕ ಮಾಧುಸ್ವಾಮಿ ನೇತೃತ್ವದ ಬಿಜೆಪಿ ನಿಯೋಗ ಇಂದು ದೆಹಲಿಗೆ ತೆರಳಿದೆ. ಅಲ್ಲದೆ, ಈ ನಿಯೋಗ ಇಂದು ಬೆಳಗ್ಗೆ ಕೆಲ ನಿಮಿಷಗಳ ಕಾಲ ರಾಜ್ಯದಲ್ಲಿ ಸರ್ಕಾರ ರಚಿಸುವ ಕುರಿತು ಅಮಿತ್ ಶಾ ಜೊತೆಗೂ ಚರ್ಚೆ ನಡೆಸಿದ್ದಾರೆ. ಆದರೆ, ಅಮಿತ್ ಶಾ ಸರ್ಕಾರ ರಚನೆಗೆ ಮನಸ್ಸು ಮಾಡದೆ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು.
ಇದೀಗ ಮಧ್ಯಾಹ್ನವೂ ಸಭೆ ನಡೆದಿಲ್ಲ. ಲೋಕಸಭಾ ಕಲಾಪದ ನೆಪವೊಡ್ಡಿರುವ ಅಮಿತ್ ಶಾ ಮಧ್ಯಾಹ್ನದ ಸಭೆಯನ್ನು ರದ್ದು ಮಾಡಿದ್ದಾರೆ. ಅಲ್ಲದೆ, ನಾಳೆಯೂ ಸಭೆ ನಡೆಯುವ ಕುರಿತು ಯಾವುದೇ ಖಚಿತತೆ ನೀಡಿಲ್ಲ. ಹೀಗಾಗಿ ಬಿಜೆಪಿ ನಿಯೋಗ ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗುವಂತಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ