janadhvani

Kannada Online News Paper

ನಾಳೆಯಿಂದ ಸುಪ್ರೀಂಕೋರ್ಟ್ ಪುನರಾರಂಭ- ರಫೇಲ್ ಪ್ರಕರಣ ಮತ್ತೆ ಕೈಗೆತ್ತಿಕೊಳ್ಳುವ ಸಾಧ್ಯತೆ

ನವದೆಹಲಿ: ಆರು ವಾರಗಳ ಬೇಸಿಗೆ ರಜೆಯ ನಂತರ ಜುಲೈ 1 ರಂದು ಪುನರಾರಂಭಗೊಳ್ಳುವ ಸುಪ್ರೀಂಕೋರ್ಟ್ ಅಯೋಧ್ಯಾ ಭೂ ವಿವಾದ, ರಫೇಲ್ ಪ್ರಕರಣಗಳನ್ನು ಮತ್ತೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರ ನೇತೃತ್ವದಲ್ಲಿ 31 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂಕೋರ್ಟ್ ರಫೇಲ್ ಪ್ರಕರಣದ ಪರಿಶೀಲನಾ ಮನವಿಯಲ್ಲಿ ತನ್ನ ತೀರ್ಪನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದಲ್ಲದೆ, ಸಿಜೆಐ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ “ಚೌಕಿದಾರ್ ಚೋರ್ ಹೈ” ಹೇಳಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನ್ನು ಉಲ್ಲೇಖಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ಕೇಸ್ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ. ರಾಹುಲ್ ಗಾಂಧಿ ಈಗಾಗಲೇ ಇದಕ್ಕೆ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ಪ್ರಕರಣವನ್ನು ಮುಚ್ಚುವಂತೆ ಕೋರಿದ್ದಾರೆ.

ಇನ್ನು ವಿವಾದಾತ್ಮಕ ಅಯೋಧ್ಯೆ ಭೂ ವಿವಾದ ವಿಚಾರವಾಗಿ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೂ ಒಳಗೊಂಡ ಮಧ್ಯಸ್ಥಿಕೆ ಸಮಿತಿಯು, ವಿವಾದಕ್ಕೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ನಿರೀಕ್ಷೆ ಇದೆ. ಇದಕ್ಕಾಗಿ ಸಿಜೆಐ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಂಗಡಿಸಬೇಕೆಂದು ನಾಲ್ಕು ಸಿವಿಲ್ ಮೊಕದ್ದಮೆಗಳಲ್ಲಿ 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಹದಿನಾಲ್ಕು ಮೇಲ್ಮನವಿ ಸಲ್ಲಿಸಲಾಗಿದೆ.

error: Content is protected !! Not allowed copy content from janadhvani.com