janadhvani

Kannada Online News Paper

ಚುನಾವಣೆಗೆ ಸ್ಪರ್ಧಿಸುವುದಿಲ್ಲ- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಬೆಂಗಳೂರು: – ಕಳೆದ ಬಾರಿ ಲೋಕಸಭಾ ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನುಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಪ್ರಕಟಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೂ ತಾವು ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದು, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲವರ್ಗದವರನ್ನು ಗುರುತಿಸುವ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ಪುತ್ರ ಮೊಮ್ಮಗ ನಿಖಿಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಾನೆ ಎಂದು ಕನಸು ಮನಸಲ್ಲೂ ತಾವು ಭಾವಿಸಿರಲಿಲ್ಲ. ಆದರೆ ಅನಿವಾರ್ಯವಾಗಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ನಿಖಿಲ್ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಹೆಸರು ಗಳಿಸುತ್ತಿದ್ದಾನೆ ಎಂದರು.

ದೆಹಲಿಗೆ ಹೋಗುವ ಸನ್ನಿವೇಶ ಈಗ ತಮಗಿಲ್ಲ. ಪಕ್ಷದ ಕಚೇರಿಯಲ್ಲಿಯೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಪಕ್ಷದಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸುವ ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆ ದೃಷ್ಟಿಯಿಂದ ಇನ್ನು ಹೆಚ್ಚು ತಡಮಾಡದೇ ಪಾದಯಾತ್ರೆ ಆರಂಭಿಸಬೇಕಿದೆ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ವರ್ಚಸು ತೋರಿಸಿದೆಯಾದರೂ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವಿನ್ನೂ ಹೆಚ್ಚಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಮತ್ತೊಂದೆಡೆ ದೇವೇಗೌಡ ಅವರನ್ನು ಕಾಡಲಾರಂಭಿಸಿದೆ. ಪಕ್ಷಕ್ಕೆ ಬಲ ತುಂಬಲು ಪಕ್ಷ ಸಂಘಟನೆ ಅನಿವಾರ್ಯವಾಗಿದ್ದು,ರಾಜ್ಯದ ವಿವಿಧ ಭಾಗಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಎದುರಾಗಿದೆ.

ಈ ನಿಟ್ಟಿನಲ್ಲಿ ನಗರದ ಖಾಸಗಿ ಹೊಟೇಲ್‍ನಲ್ಲಿ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಕುರಿತು ಜೆಡಿಎಸ್‍ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಳೆದ ಬಾರಿ ಪಾದಯಾತ್ರೆಯಿಂದಾಗಿ ಜೆಡಿಎಸ್‍ ಆದ ಲಾಭನಷ್ಟಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಸಭೆ ಬಳಿಕ ಮಾತನಾಡಿದ ದೇವೇಗೌಡರು, ಜೆಡಿಎಸ್ ಪಾದಯಾತ್ರೆಯಿಂದಾಗಿ ಮೈತ್ರಿ ಸರ್ಕಾರಕ್ಕೆ ಅಪಾಯವಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಪಾದಯಾತ್ರೆ ಮಾಡಬೇಕಿದೆ. ಪಕ್ಷ ಸಂಘಟನೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಅವರು, ಒಂದು ತಿಂಗಳಿನಲ್ಲಿ ಪಕ್ಷದಲ್ಲಿ ಎಲ್ಲಾ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಪ್ರಶ್ನೆ ಕಾಡುತ್ತಿದ್ದು, ಪ್ರಾದೇಶಿಕ ಪಕ್ಷಗಳು ಇಲ್ಲದೇ ಹೋದರೆ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಾರೆ ಎಂದು ಸೂಕ್ಷ್ಮವಾಗಿ ಪಕ್ಷದ ಉಳಿವಿನ ಬಗ್ಗೆ ಅವರು ವ್ಯಕ್ತಪಡಿಸಿದರು.

ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಕುಟುಂಬ ರಾಜಕಾರಣ ‌ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಕುಟುಂಬದಿಂದ ಮೂವರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಚರ್ಚೆಗಳು ತಮ್ಮ ಗಮನಕ್ಕೆ ಬಂದಿವೆ. ಮೂವರು ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇನೆ ಎನ್ನುವ ಮೂಲಕ ಕುಟುಂಬ ರಾಜಕಾರಣದ ಹಣೆಪಟ್ಟಿಯಿಂದ ಹೊರಬರುವ ಬಗ್ಗೆ ಅವರು ಸ್ಪಷ್ಟಪಡಿಸಿದರು.

ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷಗಳು ಸಂದಿವೆಯಾದರೂ ಸರ್ಕಾರಕ್ಕೆ ಜನಪ್ರಿಯತೆ ಸಿಗುತ್ತಿಲ್ಲ. ಅಲ್ಲದೇ ಸರ್ಕಾರದ ಯೋಜನೆಗಳು, ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಸಾಲಮನ್ನಾ ಯೋಜನೆ ಜಾರಿಗೊಳಿಸುತ್ತಿದ್ದರಾದರೂ ಜನರಿಗೆ ಇವು ನಿರೀಕ್ಷಿತ ಮಟ್ಟದಲ್ಲಿ ಹತ್ತಿರವಾಗುತ್ತಿಲ್ಲ. ಪಾದಯಾತ್ರೆ ಮೂಲಕ ಮೈತ್ರಿ ಸರ್ಕಾರದ ಕಾರ್ಯಕ್ರಮಗಳು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಸಾಲಮನ್ನಾ ಯೋಜನೆಯನ್ನು ಪ್ರಚುರ ಪಡಿಸುವ ಮೂಲಕ ಜನರಿಗೆ ಹತ್ತಿರವಾಗಲು ಪ್ರಯತ್ನ ನಡೆಸುತ್ತಿದ್ದಾರೆ.ಪಾದಯಾತ್ರೆಯ ಜವಾಬ್ದಾರಿಯನ್ನು ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಹೆಗಲಿಗೇರಿಸಿಕೊಂಡಿದ್ದು, ಪಕ್ಷದ ಸಚಿವರು, ಶಾಸಕರು ಹಾಗೂ ಮುಖಂಡರ ಜೊತೆಗೂಡಿ ಎರಡು ಹಂತಗಳಲ್ಲಿ ಪಾದಯಾತ್ರೆ ನಡೆಸಲು ಸಜ್ಜಾಗುತ್ತಿದ್ದಾರೆ.

ವೈ.ಎಸ್.ವಿ.ದತ್ತಾ ಮಾತನಾಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗಿದೆ. ಆದರೆ ರೈತರ ಸಾಲಮನ್ನಾ ಯೋಜನೆಯಿಂದ ಜೆಡಿಎಸ್ ಗೆ ರಾಜಕೀಯ ಲಾಭ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂ.ಹಾಕುವುದಾಗಿ ಕಳೆದ ಬಾರಿ ಮೋದಿ ನೇತೃತ್ವದ ಸರ್ಕಾರ ಘೋಷಣೆ ಮಾಡಿದ್ದು, ಬರಿ 6 ಸಾವಿರ ರೂ.ಘೋಷಣೆಗೆ ಜನರು ಬಿಜೆಪಿಗೆ ಹತ್ತಿರವಾಗಿದ್ದಾರೆ ಎಂದ ಮೇಲೆ 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ ಜೆಡಿಎಸ್‍ ಪಕ್ಷಕ್ಕೆ ಜನರು ಏಕೆ ಹತ್ತಿರವಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದ ದತ್ತಾ, ಮುಂಬರುವ ಚುನಾವಣೆಯ ಗೆಲುವಿನ ಬಗ್ಗೆ ಚಿಂತಿಸದೇ ಲೋಕಸಭಾ ಚುನಾವಣೆಯ ಸೋಲಿನ ಚರ್ಚೆಯನ್ನು ಮಾಡದೇ ಪಕ್ಷ ಸಂಘಟನೆ ಮಾಡಬೇಕು. ಹೀಗಾಗಿ ರಾಜ್ಯದಲ್ಲಿ ಪಕ್ಷದ ಹವಾಕ್ರಿಯೇಟ್ ಮಾಡಬೇಕು ಎಂದರು.

ಆಗಸ್ಟ್ 20 ರಂದು ಹಿಂದುಳಿದ ವರ್ಗದ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನದಂದೇ ಪಾದಯಾತ್ರೆಗೆ ಚಾಲನೆ ಕೊಡಲಾಗುತ್ತಿದೆ. ಮೊದಲ ಹಂತದಲ್ಲಿ 1475 ಕಿ.ಮೀ ಪಾದಯಾತ್ರೆ ನಡೆಸಲಾಗುತ್ತಿದ್ದು, ಕಾವೇರಿಯಿಂದ ತುಂಗಭಧ್ರೆಯವರೆಗೆ

ತುಂಗಭಧ್ರೆ, ಕೃಷ್ಣಾದಿಂದ ಮಲಪ್ರಭ ವರೆಗೆ ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಬೆಂಗಳೂರು, ಹೋಸಕೋಟೆ, ಚಿಂತಾವಣಿ, ಕುಣಿಗಲ್, ತುಮಕೂರು, ನೆಲಮಂಗಲ, ಮಡಿಕೇರಿ, ಸುಳ್ಯ, ಮಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರ ವರೆಗೆ ಪಾದಯಾತ್ರೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಮೊದಲಿಗೆ ಪಾದಯಾತ್ರೆ ಆರಂಭಿಸಿದ್ದು ದೇವೇಗೌಡರೇ. ಈ ಹಿಂದೆ ನೀರು, ರಾಜ್ಯ ಎಂದು ಅವರು ಹೋರಾಟ ಮಾಡಿದ್ದರು. ಆದರೆ ಈ ಬಾರಿ ಪ್ರಾದೇಶಿಕ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಅನಿವಾರ್ಯತೆಯಿದ್ದು, ಪಕ್ಷವನ್ನು ಉಳಿಸಿಕೊಳ್ಳುವುದೇ ಪಾದಯಾತ್ರೆಯ ಮುಖ್ಯ ಉದ್ದೇಶ ಎಂದು ದತ್ತಾ ತಿಳಿಸಿದರು.

error: Content is protected !! Not allowed copy content from janadhvani.com