janadhvani

Kannada Online News Paper

ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್

ಬೆಂಗಳೂರು : ಅಝಾನ್ ಕರೆಗೆ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಸ್ಪಷ್ಟೀಕರಣ ನೀಡಿದ್ದು, ಬೆಳಗ್ಗಿನ ಅಝಾನ್ ಗೆ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.

ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪ್ರಾರಂಭವಾಗುವ ಬೆಳಗಿನ ಅಝಾನ್‌ಗೆ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಬೋರ್ಡ್ ಆಫ್ ವಕ್ಫ್ ಶುಕ್ರವಾರ ಸ್ಪಷ್ಟಪಡಿಸಿದೆ.

ಮಾರ್ಚ್ 9 ರಂದು ಕರ್ನಾಟಕ ರಾಜ್ಯ ಬೋರ್ಡ್ ಆಫ್ ವಕ್ಫ್ ಎಲ್ಲಾ ಮಸೀದಿಗಳು ಮತ್ತು ದರ್ಗಾಗಳು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳನ್ನು ಬಳಸದಂತೆ ಕೋರಿ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಶಬ್ದ ಮಾಲಿನ್ಯ (ಮಿತಿ ಮತ್ತು ನಿಯಂತ್ರಣ) ನಿಯಮಗಳು 2000 ರ ಮಾರ್ಗಸೂಚಿಗಳನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಕ್ಫ್‌ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚಿಸಲಾಗಿದೆ.

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಕಳೆದ ಡಿ.19ರಂದು ರಾಜ್ಯ ವಕ್ಫ್‌ ಬೋರ್ಡ್ ಸಭೆ ನಡೆಸಿತ್ತು. ಎಲ್ಲಾ ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಗಳಿಗೆ ಶಬ್ದ ಮಾಲಿನ್ಯ ನಿಯಂತ್ರಣ ಸಂಬಂಧ ಅರಿವು ಮೂಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಮಹತ್ವದ ಸುತ್ತೋಲೆ ಹೊರಡಿಸಿರುವ ರಾಜ್ಯ ವಕ್ಫ್‌ ಬೋರ್ಡ್, ಮಸೀದಿ ಹಾಗೂ ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಕೆ ಮಾಡದಂತೆ ಸೂಚಿಸಿದೆ. ಆದರೆ, ಅಝಾನ್‌ಗೆ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ವಕ್ಫ್‌ ಬೋರ್ಡ್‌ ಸದಸ್ಯ ಮತ್ತು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ಅವರು, ‘ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿರುತ್ತದೆ. 10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯವರು ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ. ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.

ವಕ್ಫ್‌ ಬೋರ್ಡ್‌ ಹೊರಡಿಸಿರುವ ಸುತ್ತೋಲೆಯ ಪ್ರಮುಖ ಸೂಚನೆಗಳು

  • ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು.
  • ಧ್ವನಿವರ್ಧಕವನ್ನು ಅಝಾನ್‌ ಮತ್ತು ಮರಣ, ಸಮಾಧಿಯ ಸಮಯ, ಚಂದ್ರ ದರ್ಶನ ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕು.
  • ಹಗಲಿನಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದಕ್ಕೆ ಸಂಬಂಧಿಸಿದಂತೆ ಸುತ್ತುರಿದ ಗಾಳಿಯ ಗುಣಮಟ್ಟದ ಮಾನದಂಡಗಳ ಪ್ರಕಾರ ಇರಬೇಕು.
  • ಯಾವುದೇ ಸಂದರ್ಭದಲ್ಲಿ ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ, ದರ್ಗಾದ ಆವರಣದಲ್ಲಿ ಸುಡಬಾರದು.
  • ಸಲಾತ್, ಜುಮಾ ಖುತ್ಬಾ, ಬಯಾನ್ಸ್, ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳಿಗೆ ಮಸೀದಿ ಅಥವಾ ದರ್ಗಾದ ಆವರಣದೊಳಗೆ ಇರುವ ಮೈಕ್‌ಗಳನ್ನು ಬಳಸಬೇಕು.
error: Content is protected !! Not allowed copy content from janadhvani.com