janadhvani

Kannada Online News Paper

ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ- 2 ನೇ ಆಡಳಿತಾವಧಿಯ ‘ಮನ್ ಕೀ ಬಾತ್’ ನಲ್ಲಿ ಪ್ರಧಾನಿ

ನವದೆಹಲಿ, ಜೂ.30-ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಜನರ ವಿಶ್ವಾಸವೇ ನನ್ನ ನಂಬಿಕೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 61 ಕೋಟಿ ಮತದಾರರು ಮಹಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಅತ್ಯಂತ ಸಾರ್ಥಕಗೊಳಿಸಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ. ಎನ್‍ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರ ಮೊಟ್ಟ ಮೊದಲ ಮನ್ ಕೀ ಬಾತ್ ಕಾರ್ಯಕ್ರಮ ಆರಂಭವಾಗಿದೆ.

ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಮೋದಿಯವರ ಮನದಾಳದ ಮಾತಿನ ಈ ಬಾನುಲಿ ಕಾರ್ಯಕ್ರಮ ಮತ್ತೆ ಎರಡನೇ ಬಾರಿಗೆ ಪ್ರಾರಂಭವಾಗಿದ್ದು, ಮನ್ ಕೀ ಬಾತ್ ಯಶಸ್ಸಿನ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.ನಾನು ಪ್ರಧಾನಿಯಾಗಿಲ್ಲ, ಈ ದೇಶದ ಜನ ನನ್ನನ್ನು ಪ್ರಧಾನಮಂತ್ರಿಯಾಗಿ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 61 ಕೋಟಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಈ ಸಂಖ್ಯೆ ಅಮೆರಿಕ ಜನಸಂಖ್ಯೆಗಿಂತಲೂ ಹೆಚ್ಚಿನದು ಎಂದು ಮೋದಿ ಮೆಚ್ಚುಗೆ ಸೂಚಿಸಿದರು.

ಮನ್ ಕೀ ಬಾತ್ ಸಮಾಜದ ಒಂದು ಕನ್ನಡಿ. ಜನರೊಂದಿಗೆ ಸಂಪರ್ಕ ಸಾಧಿಸಲು ನನಗೆ ಪ್ರೇರಣೆ ನೀಡಿದೆ. ಇದು ನಮ್ಮ ದೇಶವಾಸಿಗಳೊಂದಿಗೆ ಸಂಪರ್ಕ ಹೊಂದಲು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ. ಜನರ ವಿಶ್ವಾಸವೇ ನನಗೆ ನಂಬಿಕೆಯಾಗಿದೆ. ಜನರ ಮಾತುಗಳಿಂದ ನನಗೆ ಪ್ರೇರಣೆ ಲಭಿಸುತ್ತದೆ. ಮನ್ ಕೀ ಬಾತ್ ಒಂದು ಜೀವಂತ ಕಾರ್ಯಕ್ರಮ ಎಂದು ಮೋದಿ ಹೇಳಿದರು.

ಸಂಸತ್‍ನಲ್ಲಿ ಇದೇ ಮೊಟ್ಟಮೊದಲ ಬಾರಿಗೆ 78 ಮಹಿಳಾ ಸದಸ್ಯರು ಚುನಾಯಿತರಾಗಿದ್ದಾರೆ. ಇದೊಂದು ದಾಖಲೆಯಾಗಿದೆ. ಮಹಿಳಾ ಸಬಲೀಕರಣಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದು ಮೋದಿ ಮನ್ ಕೀ ಬಾತ್‍ನ ಎರಡನೇ ಸರಣಿಯಲ್ಲಿ ಬಣ್ಣಿಸಿದರು.

ವಿಶ್ವವಿಖ್ಯಾತ ಕೇದಾರನಾಥ ಮಂದಿರಕ್ಕೆ ತಾವು ಭೇಟಿ ನೀಡಿದ ವಿಷಯವನ್ನು ವಿರೋಧ ಪಕ್ಷಗಳು ರಾಜಕೀಯಗೊಳಿಸಿದವು. ಆದರೆ ನಾನು ಯಾವುದೇ ಸ್ವಾರ್ಥ ಉದ್ದೇಶಕ್ಕೆ ಅಲ್ಲಿಗೆ ಭೇಟಿ ನೀಡಿರಲಿಲ್ಲ. ದೇವರಿಗೆ ನನ್ನ ಪ್ರಾರ್ಥನೆ ಸಲ್ಲಿಸುವ ಉದ್ದೇಶ ಮಾತ್ರ ಇದಾಗಿತ್ತು ಎಂದು ಮೋದಿ ಸಮರ್ಥಿಸಿಕೊಂಡರು.

ನೀರಿನ ಸಂರಕ್ಷಣೆ ಈಗ ಅತ್ಯಮೂಲ್ಯವಾಗಿದ್ದು, ಮಳೆ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಪ್ರಕೃತಿಯ ವರದಾನವಾದ ಮಳೆ ನೀರಿನಲ್ಲಿ ಕೇವಲ ಶೇ.6ರಷ್ಟು ಮಾತ್ರ ಬಳಸಿಕೊಳ್ಳುತ್ತಿದ್ದು, ಉಳಿದ ಮಳೆ ನೀರು ವ್ಯರ್ಥವಾಗುತ್ತಿದೆ. ಇದನ್ನು ಅರಿತು ಜನತೆ ನೀರಿನ ಸದ್ಬಳಕೆಗೆ ಮುಂದಾಗಬೇಕು ಎಂದು ಮೋದಿಯವರು ಇದೇ ವೇಳೆ ಕರೆ ನೀಡಿದರು.

error: Content is protected !! Not allowed copy content from janadhvani.com