ಸಿಜೆಐ ವಿರುದ್ಧ ಆರೋಪ: ವ್ಯವಸ್ಥಿತ ಪಿತೂರಿ ಎಂದ ವಕೀಲರಿಗೆ ನೋಟೀಸ್

ನವದೆಹಲಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಸಿಜೆಐ ಪರ ವಕೀಲ ಉತ್ಸವ್​ ಬೈನ್ಸ್​ ಅವರು ಸಿಜೆಐ ವಿರುದ್ಧ ಮಾಡಲಾಗಿರುವ ಆರೋಪ ವ್ಯವಸ್ಥಿತ ಪಿತೂರಿ ಎಂದು ವಾದ ಮಂಡಿಸಿದ್ದರು. ವಾದ ಮಂಡನೆ ವೇಳೆ, ಸೂಕ್ತ ಸಾಕ್ಷ್ಯಾಧಾರ ಇಲ್ಲದೆ, ವೈಯಕ್ತಿಕ ವಿಚಾರ ಎಳೆದುತಂದಿದ್ದಕ್ಕೆ ವಕೀಲ ಬೈನ್ಸ್​ ಅವರಿಗೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದೆ.

ನ್ಯಾ.ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ವಕೀಲ ಬೈನ್ಸ್​ ಅವರಿಗೆ, ನ್ಯಾಯಾಲಯಕ್ಕೆ ಸರಿಯಾದ ಸಾಕ್ಷ್ಯಗಳೊಂದಿಗೆ ಬನ್ನಿ ಎಂದು ಹೇಳಿ ನೋಟಿಸ್ ನೀಡಿದೆ.

ಇಂದು ವಿಚಾರಣೆ ವೇಳೆ ವಾದ ಮಂಡಿಸಿದ್ದ ಉತ್ಸವ್ ಬೈನ್ಸ್​ ಅವರು, ನರೇಶ್​ ಗೋಯಲ್​ ಅವರು ರೋಮೇಶ್​ ಶರ್ಮಾ ಎಂಬುವವರ ಮೂಲಕ ತಮ್ಮ ಜೆಟ್​ ಏರ್​ವೇಸ್​ ಸಂಸ್ಥೆಯ ಸಾಲ ಮನ್ನಾ ವಿಚಾರವಾಗಿ ತಮ್ಮ ಪರವಾಗಿ ತೀರ್ಪು ನೀಡುವಂತೆ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರಿಗೆ ಲಂಚದ ಆಮಿಷ ಒಡ್ಡಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರ ಈ ಜೆಟ್​ ಏರ್​ವೇಸ್​ ಸಂಸ್ಥೆಗೆ ಭಯೋತ್ಪಾದಕ ದಾವೂದ್ ಇಬ್ರಾಯಿಂ ಕೂಡ ಹಣ ಹೂಡಿದ್ದಾನೆ ಎನ್ನಲಾಗಿದೆ. ನ್ಯಾ.ಗೋಗೊಯ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಮತ್ತು ನ್ಯಾಯಮೂರ್ತಿಗೆ ಲಂಚ ಕೊಡುವಲ್ಲಿ ಅವರು ವಿಫಲರಾದರು ಎಂದು ವಾದಿಸಿದ್ದರು.

ತಾವು ಸಲ್ಲಿಸಿರುವ ಅಫಿಡವಿಟ್​ನಲ್ಲಿ ಸಿಜೆಐ ಅವರು ಹಣಕ್ಕಾಗಿ ತೀರ್ಪಿಗೆ ತಿಲಾಂಜಲಿ ಹಾಡಿದ್ದರು. ಹೀಗಾಗಿ ಶರ್ಮಾ ಅವರಿಗೆ ಸಿಜೆಐ ರಾಜೀನಾಮೆ ಕೊಡಿಸುವುದು ಮತ್ತು ಈ ಸಂಚಿನಲ್ಲಿ ಸಿಕ್ಕಿಸಿಹಾಕುವುದು ಬೇಕಾಗಿತ್ತು ಎಂದು ವಕೀಲರು ಹೇಳಿದ್ದಾರೆ. ಅಲ್ಲದೇ, ವೈಯಕ್ತಿಕವಾಗಿ ಅಜಯ್​ ಎಂಬುವವರ ಹೆಸರನ್ನು ಹೇಳಿರುವ ವಕೀಲರು, ಏಪ್ರಿಲ್ 4ರಂದು ಅವರ ಬಳಿ ಬಂದ ಅಜಯ್​ ತನ್ನನ್ನು ನ್ಯಾಯಾಲಯದ ಮಾಜಿ ಸಿಬ್ಬಂದಿ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದರು. ನ್ಯಾಯಮೂರ್ತಿಗೆ 50 ಲಕ್ಷದ ಲಂಚದ ಆಮಿಷ ಒಡ್ಡಿದ್ದರು. ಇದಕ್ಕೆ ಅವರು ಒಪ್ಪದಿದ್ದಾಗ ಹಣದ ಪ್ರಮಾಣವನ್ನು 1.5 ಕೋಟಿಗೆ ಹೆಚ್ಚಿಸಲಾಯಿತು. ಅದನ್ನು ನಿರಾಕರಿಸಿದಾಗ ಗೊಯೆಲ್ ಮತ್ತು ಶರ್ಮಾ ಈ ಪಿತೂರಿ ಎಣೆದಿದ್ದಾರೆ. ಮಹಿಳೆ ಮಾಡಿರುವ ಆರೋಪದಲ್ಲಿ ಹಲವು ಲೋಪದೋಷಗಳಿವೆ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಸ್ವತಂತ್ರ ತನಿಖಾಧಿಕಾರಿಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬೈನ್ಸ್​ ಮನವಿ ಮಾಡಿದರು.

ಸಿಜೆಐ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಬಳಿಕ ನ್ಯಾ.ಗೋಗೊಯ್ ಅವರು ತಮ್ಮ ಮೇಲೆ ಕೇಳಿ ಬಂದ ಆರೋಪವನ್ನು ನಿರಾಕರಿಸಿ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇಂದು ತುಂಬಾ ಗಂಭೀರ ಬೆದರಿಕೆ ಎದುರಿಸುತ್ತಿದೆ ಎಂದು ಇದೇ ಪ್ರಕರಣ ಸಂಬಂಧ ಶನಿವಾರ ನಡೆದ ವಿಶೇಷ ವಿಚಾರಣೆ ವೇಳೆ ಹೇಳಿದ್ದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!