janadhvani

Kannada Online News Paper

ಮೋದಿ ಅಧಿಕಾರವಧಿಯಲ್ಲಿ ಬೀಫ್ ರಫ್ತು ಪ್ರಮಾಣ ಭಾರೀ ಹೆಚ್ಚಳ

ನವದೆಹಲಿ: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರವಧಿಯಲ್ಲಿಯೇ ಬೀಫ್ ರಫ್ತು ಪ್ರಮಾಣ ಏರಿಕೆಯಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಗೋಮಾಂಸ ನಿಷೇಧ ಆಗಿರುವುದರಿಂದಾಗಿ ಕೋಣ/ಎಮ್ಮೆ ಮಾಂಸ ರಫ್ತು ಏರಿಕೆಯಾಗಿದೆ. ಬೀಫ್ ರಫ್ತಿನಲ್ಲಿ ಭಾರತ ಇತರ ದೇಶಗಳಿಂದ ಮುಂಚೂಣಿಯಲ್ಲಿದೆ.

ಹ್ಯೂಮನ್ ರೈಟ್ಸ್ ವಾಚ್(ಎಚ್ಆರ್‌ಡಬ್ಲ್ಯೂ) ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಗೋರಕ್ಷರರ ದಾಳಿಯಿಂದಾಗಿ ಭಾರತದಲ್ಲಿನ ಬೀಫ್ ರಫ್ತು ಕುಸಿತ ಕಂಡು ಬಂದಿದೆ.

ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಅಂಕಿ ಅಂಶ ಪ್ರಕಾರ 2014ರಲ್ಲಿ ಮೋದಿ ಅಧಿಕಾರಕ್ಕೇರಿದ ನಂತರ ಬೀಫ್ ರಫ್ತು ಗಣನೀಯ ಏರಿಕೆ ಕಂಡುಕೊಂಡಿದೆ.

2014- 15ರಲ್ಲಿ ಬೀಫ್ ರಫ್ತು 14,75,540 ಮೆಟ್ರಿಕ್ ಟನ್ ಆಗಿದೆ.10 ವರ್ಷಗಳ ಪೈಕಿ ಅತೀ ಹೆಚ್ಚು ಪ್ರಮಾಣದಲ್ಲಿ ಬೀಫ್ ರಫ್ತು ಆದ ವರ್ಷ ಇದಾಗಿದೆ. 2013- 14ರಲ್ಲಿ ರಫ್ತು ಪ್ರಮಾಣ 13,65,643 ಮೆಟ್ರಿಕ್ ಟನ್ ಆಗಿತ್ತು. 2015- 16ರಲ್ಲಿ ಶೇ. 11 ಕುಸಿತ ಕಂಡು ಬಂತು. ಅಂದರೆ ಆ ವರ್ಷ ರಫ್ತು ಆಗಿದ್ದು 13,14,161 ಮೆಟ್ರಿಕ್ ಟನ್.

ಬೀಫ್ ಸೇವಿಸಿದ್ದಕ್ಕಾಗಿ ವ್ಯಕ್ತಿಯನ್ನು ಹೊಡೆದು ಕೊಂದ ಮೊದಲ ಪ್ರಕರಣ ಬೆಳಕಿಗೆ ಬಂದಾಗ ಬೀಫ್ ರಫ್ತು ನಲ್ಲಿ ಕುಸಿತ ಕಂಡು ಬಂತು. ಉತ್ತರ ಪ್ರದೇಶದ ದಾದ್ರಿ ಜಿಲ್ಲೆಯ ಬಿಸಾರಾ ಗ್ರಾಮದಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂಬ ಆರೋಪದಲ್ಲಿ 2015 ಸೆಪ್ಟಂಬರ್ ತಿಂಗಳಲ್ಲಿ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಜನರ ಗುಂಪೊಂದು ಹೊಡೆದು ಕೊಂದಿತ್ತು.

ಇದಾದ ನಂತರದ ಎರಡು ವರ್ಷಗಳಲ್ಲಿ ಬೀಫ್ ರಫ್ತು ಗಣನೀಯವಾಗಿ ಏರಿಕೆಯಾಯಿತು. 2016-17ರಲ್ಲಿ ಬೀಫ್ ರಫ್ತು 13,30,013 ಮೆಟ್ರಿಕ್ ಟನ್ ಆಗಿತ್ತು.ಅಂದರೆ 2015-16ಕ್ಕಿಂತ ಶೇ. 1.2 ಏರಿಕೆಯಾಗಿದೆ.

2017-18ರಲ್ಲಿ ಮತ್ತೆ ಅದು 13,48,225 ಮೆಟ್ರಿಕ್ ಟನ್‍ಗೆ ಏರಿಕೆಯಾಯಿತು. ಅಂದರೆ 2016- 17ರಲ್ಲಿ ರಫ್ತಾಗಿರುವುದಕ್ಕಿಂತ ಶೇ.1.3 ಏರಿಕೆಯಾಗಿತ್ತು.

ಜಗತ್ತಿನಲ್ಲಿ ಅತೀ ಹೆಚ್ಚು ಬೀಫ್ ರಫ್ತು ಮಾಡುವ ದೇಶವಾಗಿದೆ ಭಾರತ. ಪ್ರತಿ ವರ್ಷ ಇಲ್ಲಿಂದ 4 ಬಿಲಿಯನ್ ಡಾಲರ್ (₹400 ಕೋಟಿ) ಮೌಲ್ಯದ ಕೋಣದ ಮಾಂಸ ರಫ್ತಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ.

2004ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಫ್ತು ಕುಸಿದಿದ್ದು, ಅತೀ ಹೆಚ್ಚು ಮಾಂಸ ಉತ್ಪಾದಿಸುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಮಾಂಸ ವಹಿವಾಟುಗಳ ಮೇಲೆ ಇದು ಪರಿಣಾಮ ಬೀರಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಂಕಿ ಅಂಶ ಪ್ರಕಾರ, 2014ರಲ್ಲಿ ಹಿಂದಿನ ವರ್ಷಗಳಲ್ಲಿನ ಬೀಫ್ ರಫ್ತುಗಿಂತ ನಂತರದ ವರ್ಷಗಳಲ್ಲಿ ಬೀಫ್ ರಫ್ತು ಕುಸಿತ ಕಾಣದೇ ಇದ್ದರೂ ಬೀಫ್ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.

ಬೀಫ್ ರಫ್ತು ಪ್ರಮಾಣ 2016-17ರಲ್ಲಿ 13,30,013 ಟನ್ ಇದ್ದದ್ದು 2017-18ರಲ್ಲಿ 13,48,225 ಆಗಿದೆ. ಆದರೆ ಇದೇ ಕಾಲಾವಧಿಯಲ್ಲಿ ರಫ್ತಾದ ಬೀಫ್ ಬೆಲೆ ₹26,303.16 ಕೋಟಿ ಇದ್ದದ್ದು ₹25,988.45 ಕೋಟಿ ಆಗಿ ಕುಸಿತ ಕಂಡುಕೊಂಡಿದೆ.

ಆದಾಗ್ಯೂ, ರಫ್ತಾಗುವ ಪ್ರಮಾಣ ಮತ್ತು ಬೆಲೆಯಲ್ಲಿನ ಕುಸಿತ ಜಾಗತಿಕ ಮಟ್ಟದಲ್ಲಿ ಬೆಲೆಯ ವ್ಯತ್ಯಾಸದಿಂದ ಆಗಿರಬಹುದು. ಈ ಎರಡರ ಮಧ್ಯೆ ನಿರ್ದಿಷ್ಟ ಸಂಬಂಧ ಇರಬೇಕು ಎಂದೇನಿಲ್ಲ ಎಂದು ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ (ಎಫ್ಐಇಒ) ಸಿಇಒ ಮತ್ತು ಮಹಾ ನಿರ್ದೇಶಕ ಅಜಯ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವು ಮೂಲಗಳ ಪ್ರಕಾರ ರಫ್ತಾಗುವ ಬೀಫ್ ಬೆಲೆ ಮತ್ತು ಪ್ರಮಾಣ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ ಎಂದು ಸಿಂಗ್ ಹೇಳಿದ್ದಾರೆ.

error: Content is protected !! Not allowed copy content from janadhvani.com