ಲಕ್ನೋ (ಜ.12): 25 ವರ್ಷಗಳ ಬಳಿಕ ಉತ್ತರಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮಹಾಮೈತ್ರಿಗೆ ಇಂದು ಅಧಿಕೃತ ಮುದ್ರೆ ಒತ್ತಿವೆ. ಕಾಂಗ್ರೆಸ್ ಒಳಗೊಂಡಂತೆ ಇತರೆ ಪ್ರಾದೇಶಿಕ ಪ್ರಮುಖ ಪಕ್ಷಗಳು ಬಿಜೆಪಿ ವಿರುದ್ಧ ಮಹಾಘಟ್ಬಂಧನ್ ರಚಿಸಿಕೊಂಡು, ಚುನಾವಣೆಗೆ ಅಣಿಯಾಗುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬದಿಗಿರಿಸಿ ಬಿಎಸ್ಪಿ ಮತ್ತು ಎಸ್ಪಿ ಮಹಾಮೈತ್ರಿ ಮಾಡಿಕೊಂಡಿವೆ.
ಈ ಸಂಬಂಧ ಇಂದು ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ್ ಮಹಾಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, “1993ರಲ್ಲಿ ಕಾನ್ಶಿರಾಮ್-ಮುಲಾಯಂ ನೇತೃತ್ವದಲ್ಲಿ ಆಡಳಿತ ನಡೆಸುವ ಮೂಲಕ ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಈ ಮೈತ್ರಿಯಿಂದಾಗಿ ಬಿಜೆಪಿಯಂಥ ಜಾತಿವಾದಿ ಪಕ್ಷ ಸೋಲು ಕಂಡಿತು. ಮತ್ತೊಮ್ಮೆ ಈಗ ನಾವು ಒಟ್ಟಾಗಿದ್ದೇವೆ,” ಎಂದು ಗುಡುಗಿದ್ದಾರೆ.
ಜನರ ಹಿತದೃಷ್ಟಿಯಿಂದ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹಳೆಯದನ್ನೆಲ್ಲ ಮರೆತು ನಾವು ಒಂದಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜತೆಗೆ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು.
ಸ್ವಾಗತಿಸಿದ ಮಮತಾ ಬ್ಯಾನರ್ಜೀ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ನೀಡುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ನಿರ್ಧಾರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಸ್ವಾಗತಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜೀ ಮುಂಬರುವ ಲೋಕಸಭೆ ಚುನಾವಣೆಗಾಗಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಟವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುವುದನ್ನು ಮಮತಾ ತೀವ್ರಗೊಳಿಸಿದ್ದಾರೆ.
Modi hogaya