ನವದೆಹಲಿ: ಅಮೆರಿಕದ ಬೆಂಬಲದೊಂದಿಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ ಉಂಟಾದ ಯುದ್ಧವು ಭಾರತಕ್ಕೆ ಅನಿರೀಕ್ಷಿತ ಸವಾಲನ್ನು ಒಡ್ಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎರಡು ಬಾರಿ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ ಎಂದು ಮೋದಿ ತಿಳಿಸಿದರು.
ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ನೀಡಲಾಗುತ್ತಿದೆ ಮತ್ತು ಯುದ್ಧವನ್ನು ಸಂಸತ್ತು ಒಕ್ಕೊರಲಿನಿಂದ ಖಂಡಿಸುತ್ತದೆ ಎಂದು ಅವರು ಲೋಕಸಭೆಯಲ್ಲಿ ಹೇಳಿದರು.
“ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯು ತೀವ್ರ ಆತಂಕವನ್ನುಂಟು ಮಾಡುತ್ತಿದೆ. ಯುದ್ಧ ಪೀಡಿತ ದೇಶಗಳೊಂದಿಗೆ ಭಾರತವು ಉತ್ತಮ ಸಂಬಂಧವನ್ನು ಹೊಂದಿದೆ. ಯುದ್ಧ ಪೀಡಿತ ಕೆಲವು ದೇಶಗಳಿಂದ ನಮಗೆ ಇಂಧನ ಸರಬರಾಜಾಗುತ್ತಿದೆ. ಸದ್ಯ ದೇಶದ ಆಮದು ಪ್ರಕ್ರಿಯೆಗೆ ಅಡೆತಡೆ ಉಂಟಾಗಿದೆ. ನಾಗರಿಕರ ಸುರಕ್ಷತೆಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಯುದ್ಧದಲ್ಲಿ ಭಾರತೀಯ ನಾಗರಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಏಷ್ಯಾದ ನಾಯಕರೊಂದಿಗೆ ಎರಡು ಬಾರಿ ಮಾತುಕತೆ ನಡೆಸಿದ್ದೇನೆ,” ಎಂದು ಮೋದಿ ಸ್ಪಷ್ಟಪಡಿಸಿದರು.
ಪ್ರಮುಖ ಅಂಶಗಳು:
ನಾಗರಿಕರ ಸುರಕ್ಷತೆ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಹಾಯವಾಣಿಗಳನ್ನು (Helplines) ಆರಂಭಿಸಲಾಗಿದೆ. ಇದುವರೆಗೆ ಸುಮಾರು 3,75,000 ಜನರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇರಾನ್ನಿಂದ ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ.
ಶಿಕ್ಷಣ: ಸಂಘರ್ಷ ಪೀಡಿತ ದೇಶಗಳಲ್ಲಿ ಸಿಬಿಎಸ್ಇ (CBSE) ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ಇಂಧನ ಭದ್ರತೆ: ಎಲ್ಪಿಜಿ ಸೇರಿದಂತೆ ಪ್ರಮುಖ ಇಂಧನಗಳು ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ತಲುಪುತ್ತವೆ. ಪ್ರಸ್ತುತ ದೇಶೀಯ ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಎಥೆನಾಲ್ ಬಳಕೆ ಮತ್ತು ರೈಲ್ವೆ ವಿದ್ಯುದ್ದೀಕರಣವು ಇಂಧನ ಅಭಾವವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.
ಆರ್ಥಿಕತೆ: ಭಾರತದ ಆರ್ಥಿಕ ಸ್ಥಿತಿ ಭದ್ರವಾಗಿದೆ. ಯುದ್ಧವು ದೇಶದ ಮೇಲೆ ಪರಿಣಾಮ ಬೀರದಂತೆ ವಿವಿಧ ಇಲಾಖೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇತರ ದೇಶಗಳಿಂದ ಆಮದನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರವು ಯಾವಾಗಲೂ ರೈತರ ಪರವಾಗಿದೆ ಎಂದು ತಿಳಿಸಿದ ಮೋದಿ, ಭಾರತವು ಶಾಂತಿಯ ಪರವಾಗಿದ್ದು, ಸಂಘರ್ಷವು ಆದಷ್ಟು ಬೇಗ ಕೊನೆಗೊಳ್ಳಬೇಕು ಎಂದು ಆಶಿಸಿದರು.






