ಮಂಗಳೂರು: ನಗರದ ಹೊರವಲಯದ ಬಜ್ಪೆ, ಕಿನ್ನಿಪದವು ಎಂಬಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಅಪರಿಚಿತ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ. ನಿನ್ನೆ ರಾತ್ರಿ 8.30 ರ ಆಸುಪಾಸಿನಲ್ಲಿ, ಕಾರು ಮತ್ತು ಪಿಕಪ್ ವಾಹನದಲ್ಲಿ ಬಂದ ಅಪರಿಚಿತರ ತಂಡವು ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿದ್ದು, ‘ಈ ಘಟನೆ ರಾತ್ರಿ 8.30 ರ ಸುಮಾರಿಗೆ ನಡೆದಿದೆ. ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ KA-12 MB 3731 ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಹಾಶ್ ಶೆಟ್ಟಿಯನ್ನು ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳು ಸುಹಾಸ್ ಶೆಟ್ಟಿ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನುಂಟುಮಾಡಿದರು. ಅವರನ್ನು ತಕ್ಷಣ ಎಜೆ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು. ಬಜ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದರು.
ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿಶೀಟರ್ ಸುಹಾಶ್ ಶೆಟ್ಟಿ, ಜುಲೈ 2022 ರಂದು ಸುರತ್ಕಲ್ನಲ್ಲಿ ಫಾಝಿಲ್ನನ್ನು ಕಡಿದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಮೇ 2 ರಿಂದ 6ರವರೆಗೆ ನಿಷೇಧಾಜ್ಞೆ
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 2 ರಿಂದ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಶುಕ್ರವಾರ ಆದೇಶ ಮಾಡಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ದೊಣ್ಣೆ, ಕತ್ತಿ, ಕೋಲು, ಬಂದೂಕು, ಚಾಕು ಸೇರಿದಂತೆ ಮನುಷ್ಯರಿಗೆ ದೈಹಿಕವಾಗಿ ಹಲ್ಲೆ ಮಾಡುವಂತಹ ಯಾವುದೇ ರೀತಿಯ ಶಸ್ತ್ರಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಆ್ಯಸಿಡ್ ಅಥವಾ ಸ್ಫೋಟಕಗಳನ್ನು ಒಯ್ಯುವಂತಿಲ್ಲ. ವ್ಯಕ್ತಿಗಳ ಪ್ರತಿಕೃತಿ ಸುಡುವಂತಿಲ್ಲ. ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು ಒಯ್ಯುವುದನ್ನು, ಶೇಖರಿಸುವುದನ್ಲನು ಅಥವಾ ತಯಾರಿಸುವುದನ್ನು ನಿಷೇಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಸ್ತರಣೆ
ರೌಡಿಶೀಟರ್, ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೀಮಿತವಾಗಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇದೇ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.
ರಾಜಕೀಯ ಲಾಭ ಮತ್ತು ಟಿಆರ್ಪಿ ಹೆಚ್ಚಳಕ್ಕಾಗಿ ಹಾತೊರೆಯುವವರ ಬಗ್ಗೆ ಎಚ್ಚರ
ಸುಹಾಸ್ ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ, ಈಗ ತಾನೇ ಮೊಳಕೆಯೊಡದಂತೆ ರಾಜಕೀಯ ನಾಯಕರು ಪ್ರತ್ಯಕ್ಷಗೊಂಡು ಘಟನೆಯ ಮೇಲೆ ಇನ್ನಷ್ಟು ತುಪ್ಪ ಸುರಿಯಲು ಹೊರಟಿದ್ದಾರೆ. ಇವರು ನೀಡುವ ಪ್ರಚೋದನಕಾರಿ ಹೇಳಿಕೆಯಿಂದಾಗಿ ಇನ್ನಷ್ಟು ಕೆರಳಿದ ಹಿಂದೂ ಕಾರ್ಯಕರ್ತರು ನಾಳೆ ಮುಸ್ಲಿಮರ ಎರಡು ವಿಕೆಟ್ ಪತನ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
ರಾಜಕೀಯ ನಾಯಕರು ಹೇಳಿಕೆ ನೀಡಿ ಅವರ ಮಕ್ಕಳು ಮತ್ತು ಕುಟುಂಬದವರೊಂದಿಗೆ ಮನೆಯಲ್ಲಿ ಆರಾಮವಾಗಿರುತ್ತಾರೆ. ಅವರ ಹೇಳಿಕೆಯಿಂದಾಗಿ ಪ್ರಚೋದಿತರಾದ ಹಿಂದೂ ಯುವಕರು ಮಚ್ಚು ಲಾಂಗು ಹಿಡಿದು ಇನ್ನೊಂದು ಹತ್ಯೆಗೆ ಮುಂದಾಗುತ್ತಾರೆ. ಹತ್ಯೆ ನಡೆದಾಗ ಕುಟುಂಬದ ಹೆತ್ತವರಿಗೆ ಮಾತ್ರ ನಷ್ಟ ಹೊರತು ಇಂದು ಬಂದು ಕೆರಳಿಸಿದ ಯಾವ ರಾಜಕೀಯ ನಾಯಕನ ಮಗನೋ, ಸಹೋದರನೋ ಇಂತಹ ಕೊಲೆ, ದೊಂಬಿ, ಗಲಾಟೆಯಲ್ಲಿ ಭಾಗಿ ಆಗುವುದಿಲ್ಲ. ಬದಲು ನಿಮ್ಮ ಮೇಲಿನ ಕೇಸು, ನಿಮ್ಮ ಹತ್ಯೆ ಅವರಿಗೆ ಮತ ಪಡೆಯುವ ಅಸ್ತ್ರವಾಗುತ್ತದೆ.
ಮಾದ್ಯಮಗಳು ಕೂಡ ತಮ್ಮ ಮಾಧ್ಯಮ ಧರ್ಮವನ್ನು ಮರೆತು, ರಾಜ್ಯದ ಜನತೆಯ ಮಧ್ಯೆ ಕೋಮು ಭಾವನೆ ಸೃಷ್ಟಿಸಿ ಬಿರುಕನ್ನುಂಟು ಮಾಡಲು ಸಂಪೂರ್ಣವಾಗಿ ವೈಭವೋಪೇತ ಸುದ್ದಿ ಪ್ರಸಾರ ಮಾಡುವಲ್ಲಿ ಬ್ಯುಸಿ ಆಗಿದೆ. ಘಟನೆಯ ಪೂರ್ಣ ಮಾಹಿತಿಯನ್ನು ಕಲೆಹಾಕದೆ, ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸಿ ಟಿಆರ್ಪಿ ಹೆಚ್ಚಿಸುವ ಉದ್ದೇಶವಿದೆ. ರಾಜ್ಯದ ಶಾಂತಿಪ್ರಿಯ ಜನರು ಇಂತಹಾ ಮಾಧ್ಯಮಗಳನ್ನು ಬಹಿಷ್ಕರಿಸಬೇಕಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ