janadhvani

Kannada Online News Paper

ಏಕರೂಪ ನಾಗರಿಕ ಸಂಹಿತೆ- ಪ್ರಧಾನಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಏಕೀಕೃತ ನಾಗರಿಕ ಸಂಹಿತೆಯಿಂದಾಗಿ ಭಾರತದ ಪ್ರಮುಖ ಲಕ್ಷಣವಾಗಿರುವ ಬಹುಸಂಸ್ಕೃತಿ ಮತ್ತು ವೈವಿಧ್ಯತೆ ನಷ್ಟವಾಗಲಿದ್ದು, ದೇಶದಲ್ಲಿ ಅಭದ್ರತೆ ಸೃಷ್ಟಿಯಾಗಲು ಹೇತುವಾಗಲಿದೆ.

ಕೋಝಿಕ್ಕೋಡ್ | ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿ ಪ್ರಧಾನಿ, ಗೃಹ ಸಚಿವರು, ಕಾನೂನು ಸಚಿವರು ಹಾಗೂ ಕಾನೂನು ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

ಏಕೀಕೃತ ನಾಗರಿಕ ಸಂಹಿತೆಯಿಂದಾಗಿ ಭಾರತದ ಪ್ರಮುಖ ಲಕ್ಷಣವಾಗಿರುವ ಬಹುಸಂಸ್ಕೃತಿ ಮತ್ತು ವೈವಿಧ್ಯತೆ ನಷ್ಟವಾಗಲಿದ್ದು, ದೇಶದಲ್ಲಿ ಅಭದ್ರತೆ ಸೃಷ್ಟಿಯಾಗಲು ಹೇತುವಾಗಲಿದೆ.ಕೇಂದ್ರ ಸರಕಾರ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯಿಂದಾಗಿಯೇ ಭಾರತವು ಇಂದು ಕಾಣುತ್ತಿರುವ ವೈಭವ ಮತ್ತು ಅಭಿವೃದ್ಧಿಯನ್ನು ಸಾಧಿಸಿದೆ. ಈ ವೈವಿಧ್ಯಗಳು ದೇಶದ ಪ್ರಗತಿಗೆ ಧಕ್ಕೆ ತರುವುದಿಲ್ಲ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂಬ ಯಾವುದೇ ಭೇದವಿಲ್ಲದೆ ಸರ್ಕಾರ ಎಲ್ಲಾ ವಿಭಾಗ ಜನರನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಮನವಿ ಪತ್ರದಲ್ಲಿ ಸೂಚಿಸಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಯಾವುದೇ ಒಂದು ವಿಭಾಗದ ಮೇಲೆ ಪರಿಣಾಮ ಬೀರುವ ಸಮಸ್ಯೆಯಲ್ಲ ಮತ್ತು ಇದು ಬಹುತ್ವ ಸಮಾಜಕ್ಕೆ ಸಂವಿಧಾನ ನೀಡಿರುವ ಹಕ್ಕುಗಳ ನಿರಾಕರಣೆಯಾಗಿದೆ ಎಂದು ಕಾಂತಪುರಂ ಈ ಹಿಂದೆ ಅಭಿಪ್ರಾಯಪಟ್ಟಿದ್ದರು.

ಮನವಿಯಲ್ಲಿ ಉಲ್ಲೇಖಿಸಲಾದ ಮುಖ್ಯಾಂಶಗಳು

ಬಹುಸಂಸ್ಕೃತಿ ಮತ್ತು ವೈವಿಧ್ಯತೆಯು ಒಂದು ರಾಷ್ಟ್ರವಾಗಿ ಭಾರತದ ಮುಖ್ಯ ಗುಣಲಕ್ಷಣಗಳಾಗಿವೆ. ನಂಬಿಕೆಗಳು, ಸಂಪ್ರದಾಯಗಳು, ಜನನ-ಮರಣ-ಮದುವೆ ಸಮಾರಂಭಗಳು ಮತ್ತು ಉತ್ತರಾಧಿಕಾರ ಕಾನೂನುಗಳು ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ವಿಭಾಗಗಳಲ್ಲಿ ಬಹಳ ವಿಭಿನ್ನವಾಗಿವೆ. ಈ ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿಯೇ ಭಾರತವು ಬೆಳೆದು ವಿಶ್ವದ ರಾಷ್ಟ್ರಗಳ ಗಮನ ಕೇಂದ್ರವಾಗಿದೆ.

ನಮ್ಮ ದೇಶದ ನಾಗರಿಕರು ಅನುಸರಿಸುವ ಸಂಸ್ಕೃತಿಗಳು ಮತ್ತು ನಂಬಿಕೆಗಳು ಯಾವುದೇ ಗುರಿಯನ್ನು ಸಾಧಿಸಲು ಅಥವಾ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಸಾಧಿಸಲು ಅಡ್ಡಿಯಾಗುವುದಿಲ್ಲ.

ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಬಹುಸಂಖ್ಯಾತರ ಹಕ್ಕುಗಳಿಗೆ ಸಮಾನವಾಗಿ ಪರಿಗಣಿಸಬೇಕು. ಇಂದು ನಾವು ನೋಡುತ್ತಿರುವ ಭಾರತೀಯ ಸಂಸ್ಕೃತಿಯು ಎಲ್ಲಾ ಜಾತಿಗಳ ವಿಶಿಷ್ಟ ಮೌಲ್ಯಗಳಿಂದ ವಿಕಸನಗೊಂಡಿದೆ.

ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಅರಿತು ಸಂವಿಧಾನ ರಚನಾಕಾರರು ದೇಶದ ಎಲ್ಲ ಸಮುದಾಯಗಳ ಹಕ್ಕುಗಳು, ಧಾರ್ಮಿಕ ಆಚರಣೆಗಳು, ವಿಧಿವಿಧಾನಗಳನ್ನು ಒಳಗೊಳ್ಳುವ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ರೂಪಿಸಿದರು. ಅಂತಹ ಹಕ್ಕುಗಳನ್ನು ಅತಿಕ್ರಮಿಸುವ ಕಾನೂನು ಕಳವಳಕಾರಿಯಾಗಿದೆ.

ವಿಶ್ವಾಸಿಗಳ ರೀತಿ ಮತ್ತು ಪದ್ಧತಿಗಳನ್ನು ಅವರದೇ ರೂಪದಲ್ಲಿ ಅನುಸರಿಸುವ ಹಕ್ಕು ಯಾವಾಗಲೂ ಅಸ್ತಿತ್ವದಲ್ಲಿದೆ ಎಂಬ ಅಂಶವು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಪ್ರತಿಯೊಬ್ಬ ಧಾರ್ಮಿಕ ವ್ಯಕ್ತಿಯೂ ತಾವು ಪವಿತ್ರವೆಂದು ಭಾವಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುವ ಹಕ್ಕನ್ನು ಹೊಂದಿರಬೇಕು.

ವೈಯಕ್ತಿಕ ನಿಯಮಗಳಲ್ಲಿರುವ ಲೋಪದೋಷಗಳನ್ನು ಸರ್ಕಾರ ಗಮನಿಸಿದರೆ ಆಯಾ ಧಾರ್ಮಿಕ ಮುಖಂಡರ ಜತೆಗೂಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಅದರ ಹೊರತಾಗಿ ಯಾವುದೇ ವಿಭಾಗದ ವೈಯಕ್ತಿಕ ನಿಯಮಗಳನ್ನು ಸಮಾಜದ ಮುಂದೆ ಚರ್ಚಿಸುವುದು ಅಭದ್ರತೆಯನ್ನು ಉಂಟುಮಾಡಲಿದೆ.

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ವಿವಿಧ ಬುಡಕಟ್ಟು ಗುಂಪುಗಳು ಮುಂದೆ ಬಂದಿವೆ. ಅಂತಹ ವಿಭಾಗಗಳ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ರಾಜ್ಯಗಳು ಕಾನೂನುಗಳನ್ನು ಅಂಗೀಕರಿಸಿವೆ. ಈ ಹಂತದಲ್ಲಿ ದೇಶದ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ರಕ್ಷಣೆಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂತಪುರಂ ಮನವಿಯಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com