ಮಂಜೇಶ್ವರ,ಅ. 2: ಸಕ್ರೀಯ ಸುನ್ನೀ ಕಾರ್ಯಕರ್ತ, ಉಲಮಾ ಸ್ನೇಹಿ ಅಂದುಚ್ಚ( ಅಂದು ಪೊಯ್ಯತಬೈಲ್) ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಂದು ಸಂಜೆ,ಪವಿತ್ರ ರಬೀಉಲ್ ಅವ್ವಲ್ ತಿಂಗಳ ಪ್ರಥಮ ಸೋಮವಾರ ರಾತ್ರಿ ನಮ್ಮನ್ನಗಲಿದರು.ಎರಡು ದಶಕಗಳಿಂದ ದೇಹ ದಣಿದಿದ್ದರೂ,ಅವರ ಆದರ್ಶ, ಚಳವಳಿಯ ಬದ್ಧತೆಗೆ ದಣಿವಿರಲಿಲ್ಲ.
ಯಾರು ಈ’ಅಂದು ಪೊಯ್ಯತಬೈಲ್’
ಬಹುಷಃ ಈ ಹೆಸರು ಕೇಳದವರು ವಿರಳ. ಕರ್ನಾಟಕದ ಕರಾವಳಿ ತೀರ ಹಾಗೂ ನೆರೆಯ ಕೇರಳದ ಮಲಬಾರ್ ತೀರದ ಸುನ್ನೀ ಜನಮಾನಸಗಳಿಗಂತೂ ಈ ಹೆಸರು ಚಿರಪರಿಚಿತ.ಅದೇನೋ ಆವೇಶ ಈ ಹೆಸರಿನ ವ್ಯಕ್ತಿಯಲ್ಲಡಗಿ ನಿಂತಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಜಂಕ್ಷನ್ ನಿಂದ ಹದಿನೈದು ಕಿಲೋ ಮೀಟರ್,ಮುಡಿಪು ಜಂಕ್ಷನ್ ನಿಂದ ಆರು ಕಿ.ಮೀ ದೂರ ಕ್ರಮಿಸಿದರೆ ಸಿಗುವ ಊರೇ ಪೊಯ್ಯತ್ತಬೈಲ್.
ಸಾಮಾಜಿಕ ತಾಣಗಳ ಬಳಕೆ ಅಧಿಕವಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಬಹುತೇಕರು ಅಂದು ಪೊಯ್ಯತ್ತಬೈಲ್ ಅನ್ನುವ ಹೆಸರು ಕೇಳಿದವರೇ ಆಗಿರಬಹುದು. ಸುನ್ನತ್ ಜಮಾಅತಿಗೋಸ್ಕರ ತನ್ನ ಜೀವವನ್ನೇ ಮುಡುಪಾಗಿಟ್ಟ ಅಂದುರವರ ಬಗ್ಗೆ ಸ್ವಲ್ಪ ಬರೆಯಬೇಕೆಂದು ತೋಚಿದಾಗ,ಅವರ ಕುರಿತಾಗಿ ಸ್ವಲ್ಪ ವಿವರಿಸಬೇಕೆನಿಸತೊಡಗಿದವು.
ಹೌದು, ನಮ್ಮಂತೆಯೇ ಸಂತೋಷದಿಂದ ನಲಿದು, ಗೆಳೆಯರೊಡನೆ ನಡೆದುಕೊಂಡು ಜೀವಿಸಬೇಕಾದ ಅಂದುರವರು ತಮ್ಮ ಶರೀರದ ಅರ್ಧ ಭಾಗ ನಿಶ್ಚಲಗೊಂಡ ಸ್ಥಿತಿಯಲ್ಲಿ ಮಲಗಿ ಕೊಂಡೇ ಜೀವನವನ್ನು ಸಾಗಿಸಲು ಪ್ರಾರಂಭಿಸಿ ಬರೋಬ್ಬರಿ ಎರಡು ದಶಕಗಳೇ ಕಳೆದುಹೋದವು..!!
ನವಚೈತನ್ಯದ, ಹೊಸಹುರುಪುಗಳ ಯೌವನದ ಯುವಕನಾಗಿದ್ದ ಅಂದು ತನ್ನ ಹತ್ತೊಂಭತ್ತನೇ ವಯಸ್ಸಿನಲ್ಲಿ ತೆಂಗಿನ ಮರದಿಂದ ಬಿದ್ದು ತನ್ನ ಸೊಂಟದ ಕೆಳಭಾಗವನ್ನು ಕಳೆದುಕೊಳ್ಳುವಂತಾಯಿತು. ಅದೆಷ್ಟೇ ಚಿಕಿತ್ಸೆ ಮಾಡಿದರೂ,ಅದೆಂತಹ ವೈದ್ಯರನ್ನು ಸಂದರ್ಶಿಸಿದರೂ ಅಂದುರವರ ಖಾಯಿಲೆ ಮಾತ್ರ ಗುಣಮುಖ ಆಗಲೇ ಇಲ್ಲ.
ದೇಹದ ಇತರ ಭಾಗಗಳಲ್ಲೂ ಕಂಡು ಬರುವ ನೋವುಗಳೊಂದಿಗೆ ಇಂದಲ್ಲ, ನಾಳೆ ನಾನು ಗುಣಮುಖವಾಗುವೆ ಅನ್ನುವ ದೃಢ ನಿರ್ಧಾರದೊಂದಿಗೆ ಜೀವನವನ್ನು ಸಾಗಿಸುತ್ತಿದ್ದ ಅಂದುರವರ ಆರೈಕೆಯನ್ನು ನಡೆಸುತ್ತಿದ್ದುದು ಮಾತ್ರ ಹೆತ್ತ ತಾಯಿಯಾಗಿದ್ದರು. ಎಲ್ಲರಂತೆ ಎದ್ದು ನಡೆದಾಡಲೂ ಸಾಧ್ಯವಾಗದ ಅಂದುರವರ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದುದು ಮಾತ್ರ ಮಲಗಿದಲ್ಲಿಂದಲೇ…!!
ಸಾಧಿಸುವ ಛಲವೊಂದಿದ್ದರೆ ಅದೇನನ್ನು ಬೇಕಾದರೂ ಸಾಧಿಸಬಹುದು ಅನ್ನುವ ಮಾತಿಗೆ ನಿದರ್ಶನವೆಂಬಂತೆ ಅಂದು ಪೊಯ್ಯತ್ತಬೈಲ್ ತಮ್ಮ ಜೀವನವನ್ನೇ ಸುನ್ನತ್ ಜಮಾಅತಿಗೋಸ್ಕರ ಮೀಸಲಿಟ್ಟರು. ಇಂದು, ಅಂದು ಅನ್ನುವ ಹೆಸರು ಸುನ್ನತ್ ಜಮಾಅತಿನ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು, ಉನ್ನತ ಮಟ್ಟದ ನಾಯಕರಿಗೂ ಚಿರಪರಿಚಿತ. ಅವರನ್ನು ಭೇಟಿಯಾಗದ ನಾಯಕರಿಲ್ಲ.
ಆದೂರ್ ತಂಙಳ್ ರವರ ನಿರ್ದೇಶನದ ಮೇರೆಗೆ ಹೊಸಂಗಡಿಯ ಉದ್ಯಮಿಯೊಬ್ಬರು ನಿರ್ಮಿಸಿಕೊಟ್ಟ ಸರಿಸುಮಾರು ನಾಲ್ಕೂವರೆ ಲಕ್ಷ ರೂಪಾಯಿಯ “ಸಾಂತ್ವನ ಮನೆ” ಯ ಉದ್ಘಾಟನೆಯನ್ನು ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರು ನೆರವೇರಿಸಿಕೊಟ್ಟಿದ್ದರು. ಹಲವು ಸಯ್ಯದರು,ಉಲಮಾಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುನ್ನತ್ ಜಮಾಅತಿನ ಪಂಡಿತರ ನಡುವೆ ಅಂದುರವರ ಒಡನಾಟ ಅದೆಷ್ಟು ಆತ್ಮೀಯತೆಯಿಂದ ಕೂಡಿದೆ ಅನ್ನುವುದನ್ನು ನಮಗಿದರಿಂದಲೇ ಮನಗಾನಬಹುದು.
ಅದೆಲ್ಲಿಯೇ ಸುನ್ನತ್ ಜಮಾಅತಿನ ಕಾರ್ಯಕ್ರಮಗಳಿದ್ದರೆ ಅಂದುರವರ ಫೇಸ್ ಬುಕ್ ಖಾತೆಯೊಳಗೆ ಅದಾಗಲೇ ಲಗತ್ತೀಕರಿಸಿ ಆಗಿರುತ್ತದೆ. ಅವರನ್ನು ಇದುವರೆಗೆ ಸಂದರ್ಶಿಸಿದವರಲ್ಲಿ ಹಲವಾರು ಧಾರ್ಮಿಕ ಪಂಡಿತರು, ಸಾದಾತುಗಳು ಸೇರಿದ್ದಾರೆ ಅದನ್ನು ನೋಡಬೇಕಾದರೆ ಅವರ ಫೇಸ್ ಬುಕ್ ಖಾತೆಯನ್ನು ಒಮ್ಮೆ ನೋಡಿದರೆ ಸಾಕು.
ನಿಜಕ್ಕೂ ಅಂದು ಅವರೊಬ್ಬರು ಭಾಗ್ಯವಂತರು. ತನ್ನ ಶರೀರದ ಅರ್ಧ ಭಾಗ ನಿಶ್ಚಲವಾಗಿ ಮಲಗಿದ್ದುಕೊಂಡೇ ಹಲವಾರು ಪಂಡಿತರ ಆತ್ಮೀಯತೆಯನ್ನು ಬೆಳೆಸಿಕೊಳ್ಳಲು ಅವರಿಂದ ಸಾಧ್ಯವಾಗಿದೆ. ಇಂದು ಅವರು ನಮ್ಮಿಂದ ಅಗಲಿದ್ದು, ಅವರ ಪರಲೋಕ ಜೀವನವನ್ನು ಅಲ್ಲಾಹು ಸುಗಮಗೊಳಿಸಲಿ.ಅವರ ಆರೈಕೆಯಲ್ಲಿ ನಿರತರಾಗಿದ್ದ ಆ ತಾಯಿಗೂ ಸರ್ವಶಕ್ತನು ಆರೋಗ್ಯದಿಂದ ಕೂಡಿದ ದೀರ್ಘಾಯುಷ್ಯವನ್ನು ನೀಡಲಿ ಅನ್ನುವ ಪ್ರಾರ್ಥನೆಯಲ್ಲದೆ ನಮ್ಮಿಂದ ಮತ್ತೇನು ಸಾಧ್ಯ ಅಲ್ಲವೇ..?!!
ಕೃಪೆ: #ಸ್ನೇಹಜೀವಿ ಅಡ್ಕ ರವರ ಬರಹದಿಂದ














