janadhvani

Kannada Online News Paper

ಯುಎಇ: ಹೊಸ ನಿಯಮ ಇಂದಿನಿಂದ ಜಾರಿ- ಉದ್ಯೋಗ ಹುಡುಕಲು ವಿಶೇಷ ವೀಸಾ ಲಭ್ಯ

ವಲಸಿಗರಿಗೆ ತುಂಬಾ ಪ್ರಯೋಜನಕಾರಿಯಾದ ಹಲವು ಹೊಸ ವೀಸಾಗಳನ್ನು ಪರಿಚಯಿಸಲಾಗುತ್ತಿದೆ.

ಅಬುಧಾಬಿ: ಯುಎಇಯಲ್ಲಿ ಹೊಸ ವೀಸಾ ನಿಯಮ ಇಂದಿನಿಂದ ಜಾರಿಗೆ ಬರಲಿದೆ.ಇದರೊಂದಿಗೆ ವೀಸಾ ಸಂಬಂಧಿತ ಕಾರ್ಯವಿಧಾನಗಳು  ಸರಳಗೊಳ್ಳಲಿದೆ.ವಲಸಿಗರಿಗೆ ತುಂಬಾ ಪ್ರಯೋಜನಕಾರಿಯಾದ ಹಲವು ಹೊಸ ವೀಸಾಗಳನ್ನು ಪರಿಚಯಿಸಲಾಗುತ್ತಿದೆ. ಹೊಸ ವೀಸಾಗಳಲ್ಲಿ ಐದು ವರ್ಷಗಳ ಅವಧಿಯ ಗ್ರೀನ್ ರೆಸಿಡೆಂಟ್ ವೀಸಾ(Green Resident Visa) ಪ್ರಮುಖವಾಗಿದೆ. ಪ್ರಾಯೋಜಕರು(Sponsor) ಅಥವಾ ಉದ್ಯೋಗದಾತರಿಲ್ಲದೆ ದೇಶದಲ್ಲಿ ಉಳಿಯಲು ಹಸಿರು ವೀಸಾ ಅನುಮತಿಸುತ್ತದೆ.

ಹೊಸ ಅತ್ಯಾಧುನಿಕ ವೀಸಾ ವ್ಯವಸ್ಥೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಇಯ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್(uae federal authority for identity and citizenship), ಕಸ್ಟಮ್ಸ್ ಮತ್ತು ಪೋರ್ಟ್ ಸೆಕ್ಯುರಿಟಿ ಪ್ರಕಟಿಸಿದೆ. ಹೊಸ ವ್ಯವಸ್ಥೆಯೊಂದಿಗೆ, ಅಸ್ತಿತ್ವದಲ್ಲಿರುವ ವೀಸಾ ಕಾರ್ಯವಿಧಾನಗಳನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಮತ್ತು ದೇಶದ ಪ್ರವೇಶ ಮತ್ತು ವಾಸ್ತವ್ಯವು ವಲಸಿಗರಿಗೆ ಸುಲಭ ಮತ್ತು ಸರಳವಾಗುತ್ತದೆ.

ವಿಸಿಟ್ ವೀಸಾಗಳು
ಯುಎಇಗೆ ಎಲ್ಲಾ ಭೇಟಿ ವೀಸಾಗಳು ಏಕ ಮತ್ತು ಬಹು ಪ್ರವೇಶ(Single and Multi Entry) ಸೌಲಭ್ಯಗಳೊಂದಿಗೆ ಲಭ್ಯವಿದೆ. ಮೊದಲು, ಸಂದರ್ಶಕರ ವೀಸಾಗಳನ್ನು 30 ದಿನಗಳವರೆಗೆ ನೀಡಲಾಗುತ್ತಿತ್ತು, ಈಗ ಸಂದರ್ಶಕರು 60 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು. ವೀಸಾವನ್ನು ನೀಡಿದ ಅದೇ ಅವಧಿಗೆ ನಂತರ ಅವುಗಳನ್ನು ವಿಸ್ತರಿಸಬಹುದಾಗಿದೆ.

ಉದ್ಯೋಗವನ್ನು ಹುಡುಕಲು ಪ್ರಾಯೋಜಕರ ಅಗತ್ಯವಿಲ್ಲದ ವಿಶೇಷ ವೀಸಾಗಳನ್ನು ಸಹ ನೀಡಲಾಗುತ್ತದೆ. ಈ ವೀಸಾವನ್ನು ಯುಎಇ ಮಾನವ ಸಂಪನ್ಮೂಲ ಸಚಿವಾಲಯ ಪಟ್ಟಿ ಮಾಡಿರುವ ಒಂದು, ಎರಡು ಮತ್ತು ಮೂರು ವಿಭಾಗದ(Skill Level) ಉದ್ಯೋಗಗಳಿಗೆ ನೀಡಲಾಗುತ್ತದೆ – ಮತ್ತು ಪ್ರಪಂಚದಾದ್ಯಂತದ ಟಾಪ್ 500 ವಿಶ್ವವಿದ್ಯಾನಿಲಯಗಳಿಂದ ಹೊರಬರುವ ಯಾವುದೇ ಕೆಲಸದ ಅನುಭವವಿಲ್ಲದ ಪದವೀಧರರು ಉದ್ಯೋಗವನ್ನು ಹುಡುಕುವ ವೀಸಾವನ್ನು ಪಡೆಯಬಹುದು.

ದೇಶಕ್ಕೆ ಭೇಟಿ ನೀಡುವವರು, ಯುಎಇಯಲ್ಲಿ ಸಂಬಂಧಿಕನೋ, ಗೆಳಯನೋ ಆಗಿರುವ ಯುಎಇ ಪ್ರಜೆ ಅಥವಾ ಯುಎಇ ಖಾಯಂ ನಿವಾಸಿಯನ್ನು ಹೊಂದಿದ್ದರೆ,ಪ್ರವೇಶ ಪರವಾನಗಿಗಾಗಿ(Entry Permit) ಅರ್ಜಿ ಸಲ್ಲಿಸಬಹುದು. ಇದಕ್ಕೂ ಪ್ರಾಯೋಜಕರ ಅಗತ್ಯವಿಲ್ಲ.
ಐದು ವರ್ಷಗಳವರೆಗೆ ಮಾನ್ಯವಾಗಿರುವ ಬಹು-ಪ್ರವೇಶ ಪ್ರವಾಸಿ ವೀಸಾಗಳಿಗೆ (Multi Entry Tourist Visa) ಪ್ರಾಯೋಜಕತ್ವದ ಅಗತ್ಯವಿಲ್ಲ. ಈ ವೀಸಾಗಳು ದೇಶದಲ್ಲಿ 90 ದಿನಗಳವರೆಗೆ ನಿರಂತರವಾಗಿ ಉಳಿಯಲು ಅನುವು ಮಾಡಿಕೊಡುತ್ತದೆ. ಅಗತ್ಯವಿದ್ದರೆ ಇದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು. ಆದರೆ, ಒಂದು ವರ್ಷದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಯುಎಇ ಯಲ್ಲಿ ಇರುವಂತಿಲ್ಲ. 4000 ಡಾಲರ್ ಗೆ ಸಮಾನವಾದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಾಬೀತುಪಡಿಸಬೇಕು. ವೀಸಾ ಅರ್ಜಿ ಅವಧಿಗೆ ಆರು ತಿಂಗಳ ಮೊದಲ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲಾಗುವುದು.

ಕುಟುಂಬ ಪ್ರಾಯೋಜಕತ್ವದ ಶರತ್ತುಗಳು
ಅನಿವಾಸಿಗಳು ತಮ್ಮ 25 ವರ್ಷಗಳವರೆಗಿನ ಗಂಡು ಮಕ್ಕಳ ಪ್ರಾಯೋಜಕತ್ವವನ್ನು ವಹಿಸಬಹುದು. ಮೊದಲು ಈ ವಯಸ್ಸಿನ ಮಿತಿ 18 ವರ್ಷವಾಗಿತ್ತು. ಅವಿವಾಹಿತ ಹೆಣ್ಣುಮಕ್ಕಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲದೆ ತಮ್ಮದೇ ಆದ ಪ್ರಾಯೋಜಕತ್ವದಲ್ಲಿ ವಾಸಿಸಲು ಅನುಮತಿಸಲಾಗಿದೆ. ವಿಕಲಾಂಗ ಮಕ್ಕಳನ್ನು ವಯಸ್ಸಿನ ಮಿತಿಯಿಲ್ಲದೆ ಪ್ರಾಯೋಜಿಸಬಹುದು. ಗ್ರೀನ್ ರೆಸಿಡೆನ್ಸಿ ಮೂಲಕ ನಿಕಟ ಸಂಬಂಧಿಗಳನ್ನು ಸಹ ಪ್ರಾಯೋಜಕತ್ವದಲ್ಲಿ  ಕರೆತರಬಹುದು.

ಗೋಲ್ಡನ್ ವೀಸಾದಲ್ಲಿ ಬದಲಾವಣೆ
ಹೆಚ್ಚಿನ ವರ್ಗದ ಜನರನ್ನು ಸೇರಿಸಲು ಗೋಲ್ಡನ್ ವೀಸಾ ವ್ಯವಸ್ಥೆಯನ್ನು ಮಾರ್ಪಡಿಸಲಾಗಿದೆ. ಗೋಲ್ಡನ್ ವೀಸಾ ಪಡೆಯಲು ಮಾಸಿಕ ಕನಿಷ್ಠ ವೇತನವನ್ನು 50,000 ದಿರ್ಹಂ ನಿಂದ 30,000 ಕ್ಕೆ ಇಳಿಸಲಾಗಿದೆ. ವೈದ್ಯಕೀಯ, ವಿಜ್ಞಾನ, ಇಂಜಿನಿಯರಿಂಗ್, ಐಟಿ, ವ್ಯವಹಾರ ಮತ್ತು ಆಡಳಿತ, ಶಿಕ್ಷಣ, ಕಾನೂನು, ಸಂಸ್ಕೃತಿ ಮತ್ತು ಸಮಾಜ ವಿಜ್ಞಾನದಂತಹ ಕ್ಷೇತ್ರಗಳ ಜನರು ಗೋಲ್ಡನ್ ವೀಸಾಗೆ ಅರ್ಜಿ ಸಲ್ಲಿಸಬಹುದು. ಅವರು ಯುಎಇಯಲ್ಲಿ ಮಾನ್ಯ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು. ಮತ್ತು ಯುಎಇ ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯದ ಪಟ್ಟಿಯ ಪ್ರಕಾರ ಒಂದು ಮತ್ತು ಎರಡು ದರ್ಜೆಯ ಉದ್ಯೋಗಗಳಲ್ಲಿ ಕೆಲಸ ಮಾಡಬೇಕು.
ಹೂಡಿಕೆದಾರರು ಎರಡು ಮಿಲಿಯನ್ ದಿರ್ಹಮ್ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ ಯುಎಇಯಲ್ಲಿ ಗೋಲ್ಡನ್ ವೀಸಾ ಪಡೆಯಬಹುದು. ಈ ಉದ್ದೇಶಕ್ಕಾಗಿ ಕೆಲವು ಸ್ಥಳೀಯ ಬ್ಯಾಂಕ್‌ಗಳಿಂದ ಸಾಲವನ್ನು ಸಹ ಅನುಮತಿಸಲಾಗಿದೆ.
ಗೋಲ್ಡನ್ ವೀಸಾ ಹೊಂದಿರುವವರು ವಯಸ್ಸಿನ ಮಿತಿಯಿಲ್ಲದೆ ಮಕ್ಕಳ ಪ್ರಾಯೋಜಕತ್ವವನ್ನು ವಹಿಸಬಹುದು. ಮತ್ತು ಎಷ್ಟೇ ಜನರನ್ನು ಬೆಂಬಲ ಸಿಬ್ಬಂದಿಯಾಗಿ ಪ್ರಾಯೋಜಿಸಬಹುದು.
ಆರು ತಿಂಗಳಿಗಿಂತ ಹೆಚ್ಚು ಕಾಲ ಯುಎಇಯ ಹೊರಗೆ ಇರುವುದರಿಂದ ಈ ವೀಸಾಗಳಲ್ಲಿ ಯಾವುದೇ ಸಮಸ್ಯೆಯಲ್ಲ.

ಹಸಿರು ವೀಸಾ
ಪ್ರಾಯೋಜಕರ ಅಗತ್ಯವಿಲ್ಲದೇ ವೃತ್ತಿಪರರು ಐದು ವರ್ಷಗಳ ಕಾಲ ಯುಎಇಯಲ್ಲಿ ಉಳಿಯಬಹುದು. ಮಾನ್ಯ ಉದ್ಯೋಗ ಒಪ್ಪಂದ ಮತ್ತು ಕನಿಷ್ಠ AED 15,000 ವೇತನವನ್ನು ಹೊಂದಿರಬೇಕು. ಸ್ವತಂತ್ರೋದ್ಯೋಗಿಗಳು ಮತ್ತು ಹೂಡಿಕೆದಾರರು ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

ರಿಯಾಯಿತಿಯ ಅವಧಿ(Grace Period)
ಈ ಹಿಂದೆ, ವೀಸಾ ಅವಧಿ ಮುಗಿದ ನಂತರ 30 ದಿನಗಳೊಳಗೆ ದೇಶವನ್ನು ತೊರೆಯಬೇಕಿತ್ತು. ಹೊಸ ಬದಲಾವಣೆಗಳು ಜಾರಿಗೆ ಬಂದ ನಂತರ, ದೇಶವನ್ನು ತೊರೆಯಲು ಆರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಆದರೆ ಇದು ಎಲ್ಲಾ ರೀತಿಯ ವೀಸಾಗಳಿಗೆ ಅನ್ವಯಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

error: Content is protected !! Not allowed copy content from janadhvani.com