janadhvani

Kannada Online News Paper

ಹಜ್ಜಾಜ್ ಗಳ ಸೇವೆಯಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿರುವ ಕೆಸಿಎಫ್ ಪಡೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಜ್ಜ್ ವೋಲೆಂಟರ್ ಕೋರ್ (HVC) ತಂಡವು ಹಜ್ಜಾಜ್ ಗಳ ಸೇವೆ ಮಾಡಲು ಕಣಕ್ಕಿಳಿದರೆ ಇತರರಿಗಿಂತ ಒಂದು ಹೆಜ್ಜೆ ಮುಂಚೂಣಿಯಲ್ಲಿರುತ್ತಾರೆ.

ಕಳೆದ ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ಹಜ್ಜಾಜ್ ಗಳ ಸೇವೆ ಮಾಡಲು ಅವಕಾಶವಿರಲಿಲ್ಲ. ಆದರೆ ಈ ವರ್ಷ ಸೀಮಿತವಾದ ಕೆಲವು ಮಂದಿಗೆ ಅವಕಾಶ ಸಿಕ್ಕಿದ್ದು, ಅದರಂತೆ ಹೆಚ್ ವಿ ಸಿ ಚೇರ್ಮಾನ್ ಹಂಝಾ ಮೈಂದಾಳ, ಕನ್ವೀನರ್ ಇಬ್ರಾಹಿಮ್ ಕಿನ್ಯಾ, ಮಕ್ಕಾ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ ಹಾಗೂ ಮದೀನಾ ಕ್ಯಾಪ್ಟನ್ ರಝ್ಝಾಕ್ ಉಳ್ಳಾಲರವರ ನೇತ್ರತ್ವದಲ್ಲಿ ಕೆಸಿಎಫ್ ಹೆಚ್ ವಿ ಸಿ 2022 ತಂಡವು ಕಾರ್ಯಾಚರಿಸುತ್ತಿದೆ.

ಜೂನ್ 04ರಂದು ಪವಿತ್ರ ಮದೀನಾಕ್ಕೆ ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜ್ ಗಳ ತಂಡವನ್ನು ಸ್ವೀಕರಿಸುವ ಮೂಲಕ 2022ರ ಕೆಸಿಎಫ್ ತಂಡವು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಈ ಸೇವೆಯು ಭಾರತದ ಕೊನೆಯ ಹಜ್ಜಾಜ್ ಗಳ ತಂಡ ಸೌದಿ ಅರೇಬಿಯಾದಿಂದ ಹಿಂತಿರುಗುವ ವರೆಗೆ ಮುಂದುವರಿಯಲಿದೆ.

ಇನ್ನು ಪವಿತ್ರ ಹಜ್ಜ್ ಕರ್ಮದ ಮರ್ಮ ಭಾಗವಾದ ಅರಫಾ, ಮುಝ್ದಲಿಫಾ, ಮಿನಾ ಹಾಗೂ ಜಮ್ರಾತ್ ನಲ್ಲಿ ಸೇವೆ ಮಾಡಲು ಬೇಕಾಗಿ ಭಾರತದ ರಾಯಭಾರಿಯಿಂದ ಅನುಮತಿ ಸಿಕ್ಕ ಸ್ವಯಂಸೇವಕರು ಈಗಾಗಲೇ ಎಲ್ಲಾ ರೀತಿಯ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿರುತ್ತದೆ.

ಮಿನಾದಿಂದ ಹಜ್ಜಾಜ್ ಗಳು ಪವಿತ್ರ ಮಕ್ಕಾದ ಅಝೀಝಿಯ್ಯಾ ತಲುಪುವಾಗ ಅಲ್ಲಿಯೂ ಕೆಸಿಎಫ್ ತಂಡ ಹಜ್ಜಾಜ್ ಗಳ ಸೇವೆಗೆ ಸನ್ನದ್ದರಾಗಿರುತ್ತಾರೆ.

ವಿಶ್ವದ ನಾನಾ ಕಡೆಗಳಲ್ಲಿ ಮುಸ್ಲಿಮರು ಈದ್ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿರುವಾಗ ಕೆಸಿಎಫ್ ಹೆಚ್ ವಿ ಸಿ ತಂಡವು ಅಲ್ಲಾಹನ ಅತಿಥಿಗಳಿಗೆ ಸೇವೆ ಮಾಡುವ ಮೂಲಕ ಅವರ ಈದ್ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಇವರ ಸೇವೆಯನ್ನು ಮೆಚ್ಚಿ ಈ ಮೊದಲು ಕಾರ್ಯಾಚರಿಸಿದ ಎಲ್ಲಾ ವರ್ಷಗಳಲ್ಲಿಯೂ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಅಭಿನಂದನಾ ಪತ್ರವೂ ದೊರಕಿದೆ.