ರಿಯಾದ್: ಎರಡು ತಿಂಗಳ ಸುದೀರ್ಘ ಲಾಕ್ ಡೌನ್ ನಂತರ ಸೌದಿ ಅರೇಬಿಯಾದ ಎಲ್ಲಾ ಮಸೀದಿಗಳನ್ನು ಶುಕ್ರವಾರದ ಜುಮಾ ಪ್ರಾರ್ಥನೆಗಾಗಿ ಇಂದು ತೆರೆಯಲಾಗುವುದು.
ಜುಮಾ ಪ್ರಾರ್ಥನೆಯ ವೇಳೆ ಸಾಮಾಜಿಕ ಅಂತರ ಸೇರಿದಂತೆ ಕಠಿಣ ಆರೋಗ್ಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗುವುದು.
ಮಸೀದಿಗಳಲ್ಲಿ ಆರೋಗ್ಯ ಸುರಕ್ಷತೆ ಮತ್ತು ಶುಚೀಕರಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು, ಮೊದಲ ಜುಮಾ ಅಝಾನ್ ಗಿಂತ 20 ನಿಮಿಷಗಳ ಮುಂಚಿತವಾಗಿ ಮಾತ್ರವೇ ಮಸೀದಿಗಳನ್ನು ತೆರೆಯಲಾಗುತ್ತದೆ. ಜುಮಾ ಮುಗಿದು ಹತ್ತು ನಿಮಿಷಗಳ ನಂತರ ಮುಚ್ಚಲಾಗುವುದು. ಜುಮುಅ ಖುತುಬಾ ಮತ್ತು ಪ್ರಾರ್ಥನೆಯನ್ನು 15 ನಿಮಿಷಗಳಿಗಿಂತ ಹೆಚ್ಚು ದೀರ್ಘಿಸದಂತೆ ಸೂಚಿಸಲಾಗಿದೆ.
ಆರೋಗ್ಯ ಸಂರಕ್ಷಣೆ ಬಗ್ಗೆ ಜುಮುಅ ವೇಳೆ ಜನರಿಗೆ ನಿರ್ದೇಶಗಳನ್ನು ನೀಡಬೇಕೆಂದು ಧಾರ್ಮಿಕ ವ್ಯವಹಾರಗಳ ಸಚಿವ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಝೀಝ್ ಆಲ್-ಶೈಖ್ ಆದೇಶಿಸಿದ್ದಾರೆ.
ಕೋವಿಡ್ ಸನ್ನಿವೇಶದಲ್ಲಿ ಮುಚ್ಚಲ್ಪಟ್ಟಿದ್ದ ಮದೀನಾದ ಪ್ರವಾದಿ ಮಸೀದಿ ಸೇರಿದಂತೆ ದೇಶದ 900,000 ಕ್ಕೂ ಹೆಚ್ಚು ಮಸೀದಿಗಳನ್ನು ಕಳೆದ ಭಾನುವಾರ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಅದರ ನಂತರದ ಮೊದಲ ಜುಮುಅ ಪ್ರಾರ್ಥನೆ ಇಂದು ನಡೆಯಲಿದೆ. ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಮಸೀದಿಗಳಲ್ಲಿ ಜುಮುಅ ವ್ಯವಸ್ಥೆ ಮಾಡಲು ಧಾರ್ಮಿಕ ವ್ಯವಹಾರಗಳ ಇಲಾಖೆ ಕ್ರಮ ಕೈಗೊಂಡಿದೆ.
ಪ್ರಸ್ತುತ ಜುಮುಅ ನಡೆಯುತ್ತಿರುವ ಮಸೀದಿಗಳ ಹೊರತಾಗಿ, 3869 ಮಸೀದಿಗಳಲ್ಲಿ ಹೊಸತಾಗಿ ಜುಮುಅ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ. ರಿಯಾದ್ನಲ್ಲಿ 656, ಮಕ್ಕಾದಲ್ಲಿ 455,ಮದೀನಾದಲ್ಲಿ 165, ಪೂರ್ವ ಪ್ರಾಂತ್ಯಗಳಲ್ಲಿ 484, ಖಸೀಮ್ನಲ್ಲಿ 205, ಅಲ್-ಜೌಫ್ನಲ್ಲಿ 92, ಅಸೀರ್ ನಲ್ಲಿ 400, ಅಲ್-ಬಹಾಯಿನಲ್ಲಿ 84, ಹಾಇಲ್ನಲ್ಲಿ 257,ತಬೂಕಿನಲ್ಲಿ 74, ಜಿಝಾನ್ನಲ್ಲಿ 816, ನಜ್ರಾನ್ನಲ್ಲಿ 60 ಮತ್ತು ಉತ್ತರ ಗಡಿ ಪ್ರದೇಶದಲ್ಲಿ 121 ಮಸೀದಿಗಳನ್ನು ಹೆಚ್ಚುವರಿಯಾಗಿ ಜುಮುಅ ಪ್ರಾರ್ಥನೆಗಾಗಿ ಸಜ್ಜುಗೊಳಿಸಲಾಗಿದೆ.






















الحمد الله