janadhvani

Kannada Online News Paper

ಗಲ್ಫ್ ದೇಶಗಳಲ್ಲಿರುವ ಭಾರತೀಯರ ರಕ್ಷೆಣೆಗೆ ರಾಹುಲ್ ಗಾಂಧಿ ಒತ್ತಾಯ

ನವದೆಹಲಿ:ಕೋವಿಡ್-19 ಪರಿಣಾಮವಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಧಾವಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರಕ್ಕೆ ಆಗ್ರಹ ಸಲ್ಲಿಸಿದ್ದಾರೆ. ಪ್ರಮುಖವಾಗಿ ಲಾಕ್‌ಡೌನ್ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ರದ್ದಾದ ಬಳಿಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರ ರಕ್ಷಣೆಗೆ ಧಾವಿಸುವಂತೆ ರಾಹುಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಎಲ್ಲಾ ವ್ಯವಹಾರಗಳು ಹಾಗೂ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಸಾವಿರಾರು ಭಾರತೀಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಹಿಂದೆ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿದ ರೀತಿಯಲ್ಲೇ, ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ರಾಹುಲ್ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಿರ್ದಿಷ್ಟ ಕ್ವಾರಂಟೈನ್ ಕ್ರಮಗಳೊಂದಿಗೆ ವಿಶೇಷ ವಿಮಾನದಲ್ಲಿ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ಮರಳಿ ತಾಯ್ನಾಡಿಗೆ ಕರೆತರುವಂತೆ ರಾಹುಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸ್ವದೇಶಕ್ಕೆ ಮರಳಲು ಬಯಿಸಿರುವ ವಿದೇಶಿ ನಾಗರಿಕರನ್ನು ಕರೆಸಿಕೊಳ್ಳದ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೆಲ ದಿನಗಳ ಹಿಂದಷ್ಟೇ ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.