ಮಂಗಳೂರು, ಏ.15- ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 44 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಮಂಗಳವಾರದಂದು ಕೇವಲ ಒಂದು ಸೋಂಕು ಪ್ರಕರಣ ಮಾತ್ರ ದಾಖಲಾಗಿದೆ.
ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆಯು ನಿಟ್ಟಿಸಿರು ಬಿಡುವಂತಾಗಿದೆ. ನಿನ್ನೆ ಕೇರಳದಲ್ಲಿ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಕಾಸರಗೋಡು ಜಿಲ್ಲೆಯ ಚೆಂಗಳ ನಿವಾಸಿಯಲ್ಲಿ ಸೋಂಕು ದೃಢಪಟ್ಟಿದೆ.ದುಬೈನಿಂದ ಬಂದಿದ್ದ ಸೋಂಕು ಕಂಡುಬಂದಿದ್ದು ಐಸೋಲೇಷನ್ ವಾರ್ಡ್ ನಲ್ಲಿದ್ದರು.
ಇದುವರೆಗೆ ಜಿಲ್ಲೆಯಲ್ಲಿ 167 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 88 ಮಂದಿ ಮಾತ್ರ ಈಗ ಚಿಕಿತ್ಸೆಯಲ್ಲಿದ್ದಾರೆ. 79 ಮಂದಿ ರೋಗ ಮುಕ್ತರಾಗಿದ್ದಾರೆ.9457 ಮಂದಿ ನಿಗಾದಲ್ಲಿದ್ದು,136 ಮಂದಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,07,075 ಜನರು ವೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,06,511ಮಂದಿ ಮನೆಗಳಲ್ಲಿ ಮತ್ತು 564 ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 81 ಮಂದಿಯನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 16,235 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಲಭಿಸಿದ 15,488 ಮಾದರಿಗಳಲ್ಲಿ, ನೆಗೆಟಿವ್ ಫಲಿತಾಂಶಗಳು ಬಂದಿವೆ.