ಹೊಸದಿಲ್ಲಿ: ಹಠಾತ್ ವಿಚ್ಛೇದನದಿಂದ ಮುಸ್ಲಿಂ ಮಹಿಳೆಯರನ್ನು ರಕ್ಷಿಸುವಂಥ ಮಹತ್ವದ ವಿಧೇಯಕವನ್ನು ರಾಜ್ಯಸಭೆಯಲ್ಲಿ ತಡೆದಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದ ಮಹಿಳಾ ಹೋರಾಟಗಾರರು, ಮುಸ್ಲಿಂ ಮಹಿಳೆಯರು ಬುದ್ಧಿವಾದ ಹೇಳಬೇಕು, ಈ ವಿಧೇಯಕ ಅಂಗೀಕಾರವಾಗಲು ಸಹಕರಿಸುವಂತೆ ಅವರ ಮೇಲೆ ಒತ್ತಡ ಹೇರಬೇಕು ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಈ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಎಡಬಿಡಂಗಿ ನೀತಿ ಅನುಸರಿಸುತ್ತಿದೆ. ಲೋಕಸಭೆಯಲ್ಲಿ ಸರ್ವಾನುಮತದಿಂದ ವಿಧೇಯಕ ಅಂಗೀಕಾರವಾಗಲು ಸಹಕರಿಸಿರುವ ಆ ಪಕ್ಷದ ನಾಯಕರು ರಾಜ್ಯಸಭೆಯಲ್ಲಿ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮಹಿಳಾ ಸಶಕ್ತೀಕರಣದ ಬಗ್ಗೆ ಸದನದ ಹೊರಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು ನಿಜಕ್ಕೂ ಮಹಿಳೆಯರ ಹಿತರಕ್ಷಣೆಯ ಕಾನೂನು ರೂಪಿಸುವ ಸಮಯ ಬಂದಾಗ ತಮ್ಮ ನಿಜಬಣ್ಣ ಪ್ರದರ್ಶಿಸುತ್ತಾರೆ ಎಂದು ಕುಟುಕಿದರು.
ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಅವರು ಮಾಡಿದ ಭಾಷಣ ಹಾಸ್ಯಾಸ್ಪದ ಮತ್ತು ಸದನದ ನಿಯಮಗಳನ್ನು ಗಾಳಿಗೆ ತೂರಿ, ಸಂಪ್ರದಾಯವನ್ನು ಮೀರಿ ಪ್ರಧಾನಿ ಅವರನ್ನು ಆಲಿಂಗನ ಮಾಡಿದ್ದು ಸದನಕ್ಕೆ ಮಾಡಿದ ಅಪಮಾನ ಎಂದೂ ಅವರು ಅಭಿಪ್ರಾಯಪಟ್ಟರು.