ಜೈಪುರ: ಹಸು ಕಳ್ಳ ಸಾಗಾಟದ ಶಂಕೆಯಿಂದ ಗುಂಪು ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಅಕ್ಬರ್ ಖಾನ್‌ರನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಯು ಉನ್ನತ ಮಟ್ಟದ ಸಮಿತಿ ರಚಿಸಿದೆ.
ಅಕ್ಬರ್ ಖಾನ್‌ನನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ ಎಂಬ ಆರೋಪಗಳ ಬಗ್ಗೆಯೂ ಸಮಿತಿ ತನಿಖೆ ನಡೆಸಲಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಗಲ್ಹೋತ್ರಾ ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಜಿಪಿ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ. ವಿಶೇಷ ಎಸ್‌ಪಿ ಶ್ರೇಣಿಯ ಅಧಿಕಾರಿಯೊಬ್ಬರು ಗುಂಪು ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಮುಂದುವರಿಯಲಿದೆ.
ಗುಂಪು ಹಲ್ಲೆ ನಡೆದಿದೆ ಎಂದು ಹೇಳಲಾದ ಸ್ಥಳದಿಂದ ರಾಮಗಡ ಸಮುದಾಯ ಆರೋಗ್ಯ ಕೇಂದ್ರವು ನಾಲ್ಕು ಕಿ.ಮೀ. ದೂರದಲ್ಲಿದೆ. ಅಕ್ಬರ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಎರಡೂವರೆ ತಾಸಿಗೂ ಹೆಚ್ಚು ಸಮಯ ತೆಗೆದುಕೊಂಡಿದ್ದರು ಎಂಬುದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಗೆಳೆಯ ಅಸ್ಲಂ ಜತೆಗೆ ಅಕ್ಬರ್ ಅವರು ಎರಡು ಹಸುಗಳ ಜತೆಗೆ ರಾಮಗಡ ಸಮೀಪದ ಕಾಡು ದಾರಿಯಲ್ಲಿ ಶುಕ್ರವಾರ ರಾತ್ರಿ ಸಾಗುತ್ತಿದ್ದರು. ಆಗ ಅವರ ಮೇಲೆ ಗುಂಪಿನಿಂದ ಹಲ್ಲೆಯಾಗಿತ್ತು. ಅಸ್ಲಂ ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ಬರ್ ಅವರ ಮೇಲೆ ಪೊಲೀಸರೇ ಹಲ್ಲೆ ನಡೆಸಿದ್ದಾರೆ ಎಂದು ರಾಮಗಡ ವಿಶ್ವ ಹಿಂದೂ ಪರಿಷತ್ ಘಟಕದ ಗೋರಕ್ಷಾ ಘಟಕದ ಅಧ್ಯಕ್ಷ ನವಲ್ ಕಿಶೋರ್ ಶರ್ಮಾ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಗದ್ದಲ: ಕಾಂಗ್ರೆಸ್ ಸಂಸದರ ಕರಣ್ ಸಿಂಗ್ ಯಾದವ್ ಅವರು ಲೋಕಸಭೆಯಲ್ಲಿ ಅಲ್ವರ್ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ್ದು ಭಾರಿ ಪ್ರತಿಭಟನೆಗೆ ಕಾರಣವಾಯಿತು. ಸ್ವಯಂಘೋಷಿತ ಗೋರಕ್ಷಕರು ಈ ಹತ್ಯೆ ಮಾಡಿದ್ದಾರೆ ಎಂದು ಸಿಂಗ್ ಹೇಳಿದ್ದು ಬಿಜೆಪಿ ಸಂಸದರನ್ನು ಕೆರಳಿಸಿತು. ಅವರು ಪ್ರತಿಭಟನೆ ನಡೆಸಿದರು. ಅಕ್ಬರ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧವೂ ಸಿಂಗ್ ಹರಿಹಾಯ್ದರು. ಆದರೆ ಬಿಜೆಪಿ ಸದಸ್ಯರ ಗದ್ದಲದಿಂದಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಲಿಲ್ಲ.
ವರದಿ ಕೇಳಿದ ಕೇಂದ್ರ: ಅಲ್ವರ್ ಹತ್ಯೆ ಪ್ರಕರಣದ ವಿವರ ನೀಡುವಂತೆ ಕೇಂದ್ರ ಸರ್ಕಾರವು ರಾಜಸ್ಥಾನ ಸರ್ಕಾರಕ್ಕೆ ಸೂಚಿಸಿದೆ.