janadhvani

Kannada Online News Paper

ದೇಶದ ದನಗಳಿಗೆ ರಕ್ಷಣೆ, ಮಾನವರಿಗೆ ಇಲ್ಲ: ಉದ್ಧವ್‌ ಠಾಕ್ರೆ ಆಕ್ರೋಶ

ಮಹಾರಾಷ್ಟ್ರ: ಅಲ್ವರ್‌ ಮತ್ತು ಇತರೆಡೆಗಳಲ್ಲಿ ನಡೆದ ಗುಂಪು ಹಲ್ಲೆ ಮತ್ತು ಹತ್ಯೆಗಳಿಗೆ ಸಂಬಂಧಿಸಿ ಶಿವಸೇನಾವು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ದೇಶದಲ್ಲಿ ದನಗಳಿಗೆ ಇರುವಷ್ಟು ರಕ್ಷಣೆ ಮಾನವರಿಗೆ ಇಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

‘ನಾವು ಸರ್ಕಾರದ ಭಾಗ. ಆದರೆ ತಪ್ಪನ್ನು ತಪ್ಪೆಂದೇ ಹೇಳುತ್ತೇವೆ. ನಾವು ಭಾರತೀಯ ಜನತೆಯ ಮಿತ್ರರೇ ಹೊರತು ಯಾವುದೇ ಪಕ್ಷದ್ದಲ್ಲ’ ಎಂದು ಉದ್ಧವ್‌ ಸ್ಪ‍ಷ್ಟಪಡಿಸಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ತಡೆಯಲು ಸರ್ಕಾರ ವಿಫಲವಾಗಿರುವುದನ್ನು ಅವರು ಖಂಡಿಸಿದ್ದಾರೆ. ಬಿಜೆಪಿಯದ್ದು ನಕಲಿ ಹಿಂದುತ್ವ. ಯಾರು ದನದ ಮಾಂಸ ತಿನ್ನುತ್ತಿದ್ದಾರೆ ಎಂಬುದರತ್ತ ಗಮನ ಹರಿಯುವಂತೆ ಮಾಡಲು ನೀವು ಗೋ ರಕ್ಷಣೆ ಎಂಬುದನ್ನು ಬಳಸಿಕೊಳ್ಳುತ್ತಿದ್ದೀರಿ. ಇದು ನಾಚಿಕೆಗೇಡಿನ ವಿಷಯವೇ ಹೊರತು ಹಿಂದುತ್ವ ಅಲ್ಲ’ ಎಂದು ಉದ್ಧವ್‌ ಹೇಳಿದ್ದಾರೆ.

‘ಈಗ ದೇಶದಲ್ಲಿ ಅನುಸರಿಸುತ್ತಿರುವ ಹಿಂದುತ್ವವನ್ನು ನಾನು ಒಪ್ಪುವುದಿಲ್ಲ. ನಮ್ಮ ಮಹಿಳೆಯರಿಗೆ ರಕ್ಷಣೆ ಇಲ್ಲ, ಆದರೆ ನೀವು ದನಗಳ ರಕ್ಷಣೆಯ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದೀರಿ. ದನಗಳನ್ನು ಕೊಲ್ಲಬೇಕು ಎಂದು ನಾವು ಯಾವತ್ತೂ ಹೇಳಿಲ್ಲ. ಆದರೆ ದನಗಳನ್ನು ರಕ್ಷಿಸುವುದರ ನಡುವೆ ದೇಶವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತವಾಗಿದೆ. ಈ ಬಗ್ಗೆ ನಮಗೆ ನಾಚಿಕೆಯಾಗಬೇಕು’  ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸರ್ಕಾರವನ್ನು ಟೀಕಿಸುವವರು ದೇಶವಿರೋಧಿಗಳಾಗುವುದಿಲ್ಲ. ದೇಶಪ್ರೇಮಿಗಳು ಯಾರು ಮತ್ತು ದೇಶದ್ರೋಹಿಗಳು ಯಾರು ಎಂಬುದನ್ನು ನಿರ್ಧರಿಸುವ ಹಕ್ಕು ಬಿಜೆಪಿಗೆ ಇಲ್ಲ ಎಂದೂ ಉದ್ಧವ್‌ ಅಭಿಪ್ರಾಯಪಟ್ಟಿದ್ದಾರೆ.

error: Content is protected !! Not allowed copy content from janadhvani.com