ರಿಯಾದ್: ಸೌದಿ ಜೈಲಿನಲ್ಲಿರುವ ಕೋಝಿಕ್ಕೋಡ್ ಮೂಲದ ರಹೀಮ್‌ಗೆ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸಿದೆ. ತನ್ನ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದ್ದಕ್ಕಾಗಿ ನ್ಯಾಯಾಲಯವು ಅವರಿಗೆ 20 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಈಗಾಗಲೇ ಸುಮಾರು ಇಪ್ಪತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವುದರಿಂದ, ಅವರ ತ್ವರಿತಗತಿಯ ಬಿಡುಗಡೆಯನ್ನು ಆಶಿಸಲಾಗಿತ್ತು. ಆದಾಗ್ಯೂ, ಮುಂದಿನ ಕ್ರಮವು ಮೇಲ್ಮನವಿಯ ಕುರಿತು ನ್ಯಾಯಾಲಯದ ನಿಲುವನ್ನು ಅವಲಂಬಿಸಿರುತ್ತದೆ.
ಸೌದಿ ಬಾಲಕನ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಸೌದಿ ಜೈಲಿನಲ್ಲಿರುವ ಕೋಝಿಕ್ಕೋಡ್ ಫರೋಕ್ ಕೋಡಂಬುಝ ಮೂಲದ ಅಬ್ದುಲ್ ರಹೀಮ್, ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಹೊಸ ನಡೆ ಇಟ್ಟಿದೆ. ಮರಣದಂಡನೆ ರದ್ದುಪಡಿಸಿದ ಪ್ರಕರಣದಲ್ಲಿ, ಮೇ 26 ರಂದು ನ್ಯಾಯಾಲಯವು ರಹೀಮ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ್ದಕ್ಕಾಗಿ ಈ ಶಿಕ್ಷೆ ವಿಧಿಸಿದೆ. ರಹೀಮ್ ಈಗಾಗಲೇ ಜೈಲಿನಲ್ಲಿ 19 ವರ್ಷಗಳನ್ನು ಪೂರೈಸಿದ್ದರಿಂದ ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂದು ಕುಟುಂಬವು ಆಶಿಸಿತ್ತು.
ಆದಾಗ್ಯೂ, ಪ್ರಾಸಿಕ್ಯೂಷನ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆ ಪೂರ್ಣಗೊಳ್ಳಬೇಕಿದೆ. ನ್ಯಾಯಾಲಯವು ಈ ಮೇಲ್ಮನವಿಯನ್ನು ತಿರಸ್ಕರಿಸಿದರೆ, ಪ್ರಾಸಿಕ್ಯೂಷನ್ ಉಚ್ಛ ನ್ಯಾಯಾಲಯವನ್ನೂ ಸಹ ಸಂಪರ್ಕಿಸಬಹುದು. 20 ವರ್ಷಗಳ ಜೈಲು ಶಿಕ್ಷೆಯನ್ನು ಪೂರೈಸಿರುವ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಬ್ದುರಹೀಮ್ ಭಾರತೀಯ ರಾಯಭಾರ ಕಚೇರಿ ಮತ್ತು ವಕೀಲರಿಗೆ ತಿಳಿಸಿರುವುದಾಗಿ ರಿಯಾದ್‌ನಲ್ಲಿರುವ ಕಾನೂನು ನೆರವು ಸಮಿತಿ ತಿಳಿಸಿದೆ. ಮೇಲ್ಮನವಿ ಸಲ್ಲಿಸಿದರೆ, ಪ್ರಕರಣದ ವಿಚಾರಣೆ ದೀರ್ಘಗೊಳ್ಳುತ್ತದೆ ಮತ್ತು ಜೈಲಿನಿಂದ ಬಿಡುಗಡೆ ವಿಳಂಬವಾಗುತ್ತದೆ. ಆದ್ದರಿಂದ ಅಬ್ದುರಹೀಮ್ ಮೇಲ್ಮನವಿ ಸಲ್ಲಿಸುವುದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಸಮಿತಿ ಹೇಳಿದೆ. ಮುಂದಿನ ಕಾನೂನು ಕ್ರಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಕ್ಕ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ರಿಯಾದ್ ಕಾನೂನು ನೆರವು ಸಮಿತಿ ಹೇಳಿದೆ.
ಈ ಸಂಬಂಧ ನ್ಯಾಯಾಲಯದಿಂದ ಹೆಚ್ಚಿನ ಮಾಹಿತಿ ಲಭಿಸಿದ ಬಳಿಕ ವಕೀಲರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.
ಸೌದಿ ಅರೇಬಿಯಾದ ಬಾಲಕನ ಕೊಲೆ ಪ್ರಕರಣದಲ್ಲಿ ಮರಣದಂಡನೆ ರದ್ದುಗೊಂಡ ಬಳಿಕವೂ ಒಂದು ವರ್ಷದಿಂದ ರಹೀಮ್ ರಿಯಾದ್ ಜೈಲಿನಲ್ಲೇ ಇದ್ದಾರೆ. ಸೌದಿ ಪ್ರಜೆ ಫೈಝ್ ಅಬ್ದುಲ್ಲಾ ಅಬ್ದುರ್ರಹ್ಮಾನ್ ಅಲ್-ಶಹ್ರಿಯವರ 15 ವರ್ಷದ ಮಗನ ಹತ್ಯೆ ಪ್ರಕರಣದಲ್ಲಿ ರಹೀಮ್ ಅವರನ್ನು ಡಿಸೆಂಬರ್ 26, 2006 ರಂದು ಜೈಲಿಗೆ ಹಾಕಲಾಯಿತು. ಸೌದಿ ಕುಟುಂಬವು 34 ಕೋಟಿ ರೂ.ಗಳ ದಿಯಾ’ಧನವನ್ನು ಸ್ವೀಕರಿಸಿ ರಹೀಂಗೆ ಕ್ಷಮೆ ನೀಡಿದ ನಂತರ 2024-ಜುಲೈ 2 ರಂದು ರಹೀಂನ ಮರಣದಂಡನೆಯನ್ನು ರದ್ದುಗೊಳಿಸಲಾಯಿತು.
ಕಳೆದ ಮೇ 26 ರಂದು ಸಾರ್ವಜನಿಕ ಹಕ್ಕುಗಳ ಕಾಯ್ದೆಯಡಿ ನ್ಯಾಯಾಲಯವು ಅವರಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಪ್ರಸ್ತುತ 19 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವ ರಹೀಮ್, ಶಿಕ್ಷೆಯನ್ನು ಪೂರ್ಣಗೊಳಿಸಲು ಇನ್ನೂ ಒಂದು ವರ್ಷ ಬಾಕಿಯಿದ್ದು, ಮುಂದಿನ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದ್ದಾರೆಂದು ನಿರೀಕ್ಷಿಸಲಾಗಿತ್ತು.