ರಿಯಾದ್: ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಆರು ಸದಸ್ಯ ರಾಷ್ಟ್ರಗಳಲ್ಲಿ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಏಕೀಕೃತ ಪ್ರವಾಸಿ ವೀಸಾ ಶೀಘ್ರದಲ್ಲೇ ಲಭ್ಯವಾಗಲಿದೆ. ಜಿಸಿಸಿ ಪ್ರಧಾನ ಕಾರ್ಯದರ್ಶಿ ಜಾಸಿಮ್ ಅಲ್-ಬುದೈವಿ ಬುಧವಾರ ಈ ಘೋಷಣೆ ಮಾಡಿದ್ದು, ಸದಸ್ಯ ರಾಷ್ಟ್ರಗಳ ಸಹಕಾರವನ್ನು ಶ್ಲಾಘಿಸಿದ್ದಾರೆ. ಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜಿಸಿಸಿ ಸದಸ್ಯ ರಾಷ್ಟ್ರಗಳಾಗಿವೆ.
ವೀಸಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಅಂತಿಮ ಚೌಕಟ್ಟು ಜಾರಿಗೆ ಬಂದ ನಂತರ ವೀಸಾವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಷೆಂಗೆನ್ ವೀಸಾ ಮಾದರಿಯಲ್ಲಿ ರೂಪಿಸಲಾದ ಜಿಸಿಸಿ ವೀಸಾ, ಪ್ರಾದೇಶಿಕ ಪ್ರವಾಸೋದ್ಯಮವನ್ನು ಪುನರ್ನಿರ್ಮಿಸುವಲ್ಲಿ ಒಂದು ಮೈಲಿಗಲ್ಲಾಗಿದೆ.
ವಿವಿಧ ಜಿಸಿಸಿ ದೇಶಗಳ ವೀಸಾ ಪಡೆಯದೆಯೇ ಪ್ರವಾಸಿಗರಿಗೆ ಈ ವೀಸಾ ಮೂಲಕ ತಮ್ಮ ಉದ್ದೇಶಿತ ಸ್ಥಳಗಳಿಗೆ ಪ್ರಯಾಣಿಸಬಹುದು.ಇದು ಕೊಲ್ಲಿ ಪ್ರದೇಶದ ಆಳವಾದ ಏಕೀಕರಣದ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ಪ್ರಾದೇಶಿಕ ಸಹಕಾರವನ್ನು ಬಲಪಡಿಸುವುದು, ಮೂಲಭೂತ ಪ್ರಯಾಣ ಸೌಲಭ್ಯಗಳನ್ನು ನವೀಕರಿಸುವುದು ಮತ್ತು ಪ್ರವಾಸೋದ್ಯಮವನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಜಾಲವಾಗಿ ಬಳಸಿಕೊಳ್ಳುವ ಗಲ್ಫ್ ನಾಯಕತ್ವದ ದೃಷ್ಟಿಕೋನವನ್ನು ಈ ಯೋಜನೆಯು ಪ್ರತಿಬಿಂಬಿಸುತ್ತದೆ ಎಂದು ಅಲ್ ಬುದೈವಿ ಗಮನಸೆಳೆದರು.
ಹೊಸ ವೀಸಾ ವ್ಯವಸ್ಥೆಯು ಸುಗಮ ಪ್ರಯಾಣವನ್ನು ನೀಡುತ್ತದೆ ಮತ್ತು ಗಲ್ಫ್ ಪ್ರವಾಸೋದ್ಯಮ ಅನುಭವಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ.