janadhvani

Kannada Online News Paper

ಸೌದಿ: ವೀಸಾ ಕಾಲಾವಧಿ ಮುಗಿದು ದೇಶದಲ್ಲೇ ಉಳಿದಿರುವವರಿಗೆ ದೇಶ ತೊರೆಯಲು ಅವಕಾಶ

ಕುಟುಂಬ, ವ್ಯವಹಾರ, ಕೆಲಸ, ಏಕ-ಪ್ರವೇಶ ಮತ್ತು ಬಹು-ಪ್ರವೇಶ ವೀಸಾಗಳು ಸೇರಿದಂತೆ ಎಲ್ಲಾ ರೀತಿಯ ಅವಧಿ ಮೀರಿದ ಸಂದರ್ಶಕ ವೀಸಾಗಳಿಗೆ ಈ ಪ್ರಯೋಜನ ಲಭ್ಯವಿದೆ

ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶಕ ವೀಸಾದಲ್ಲಿ ಆಗಮಿಸಿ ವೀಸಾ ಅವಧಿ ಮುಗಿದ ನಂತರವೂ ಸೌದಿಯಲ್ಲಿ ಉಳಿದುಕೊಂಡಿರುವವರಿಗೆ ದೇಶವನ್ನು ತೊರೆಯಲು ಮತ್ತು ತಮ್ಮ ವೀಸಾಗಳನ್ನು ನವೀಕರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸೌದಿ ಜವಾಝಾತ್ (ಪಾಸ್‌ಪೋರ್ಟ್ ನಿರ್ದೇಶನಾಲಯ) ಇದಕ್ಕಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಪ್ರಯೋಜನವು ಒಂದು ತಿಂಗಳವರೆಗೆ ಲಭ್ಯವಿರುತ್ತದೆ.

ದಂಡ ಪಾವತಿಸಿ ವೀಸಾ ಮಾನ್ಯತೆಯನ್ನು ಇನ್ನೊಂದು ತಿಂಗಳಿಗೆ ವಿಸ್ತರಿಸಲು ಹಾಗೂ ದೇಶ ಬಿಟ್ಟು ಹೋಗುವ ಸೌಲಭ್ಯವನ್ನು ಅಧಿಕಾರಿಗಳು ಒದಗಿಸಿದ್ದಾರೆ. ಇದಕ್ಕಾಗಿ ವೈಯಕ್ತಿಕ ಪೋರ್ಟಲ್ ಆದ ಅಬ್ಶೀರ್ ಪ್ಲಾಟ್‌ಫಾರ್ಮ್‌ನಲ್ಲಿರುವ ‘ತವಾಸುಲ್’ ಸೇವೆಯ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಕಾರ್ಯವಿಧಾನಗಳನ್ನು 30 ದಿನಗಳಲ್ಲಿ ಪೂರ್ಣಗೊಳಿಸಬೇಕು.

ಕುಟುಂಬ, ವ್ಯವಹಾರ, ಕೆಲಸ, ಏಕ-ಪ್ರವೇಶ ಮತ್ತು ಬಹು-ಪ್ರವೇಶ ವೀಸಾಗಳು ಸೇರಿದಂತೆ ಎಲ್ಲಾ ರೀತಿಯ ಅವಧಿ ಮೀರಿದ ಸಂದರ್ಶಕ ವೀಸಾಗಳಿಗೆ ಈ ಪ್ರಯೋಜನ ಲಭ್ಯವಿದೆ. ಅರ್ಜಿಯನ್ನು ವೀಸಾದ ಪ್ರಾಯೋಜಕರು ಸಲ್ಲಿಸಬೇಕು. ಅಂದರೆ, ಸೌದಿ ಅರೇಬಿಯಾದಲ್ಲಿ ರೆಸಿಡೆನ್ಸ್ ಸ್ಟಾಟಸ್ ಹೊಂದಿರುವ ವೀಸಾ ಪಡೆದವರು ತಮ್ಮ ಅಬ್ಶಿರ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.