janadhvani

Kannada Online News Paper

ರಂಜಾನ್ : ಸೌದಿ ಅರೇಬಿಯಾದಲ್ಲಿ ಕೈದಿಗಳಿಗೆ ಕ್ಷಮಾದಾನ ಘೋಷಣೆ

ಕ್ಷಮಾದಾನಕ್ಕೆ ಅರ್ಹರಾದವರನ್ನು ಗುರುತಿಸಲು ಪ್ರತಿ ಪ್ರಾಂತ್ಯದಲ್ಲೂ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ.

ದಮ್ಮಾಮ್: ಸೌದಿ ಅರೇಬಿಯಾದಲ್ಲಿ ರಂಜಾನ್ ಪ್ರಯುಕ್ತ ದೇಶದ ಕೈದಿಗಳಿಗೆ ಕ್ಷಮಾದಾನ ಘೋಷಿಸಲಾಗಿದೆ. ಈ ನಿರ್ಧಾರವು ವಲಸಿಗರು ಸೇರಿದಂತೆ ಅನೇಕರಿಗೆ ಪರಿಹಾರವಾಗಲಿದೆ. ದೊರೆ ಸಲ್ಮಾನ್ ಘೋಷಿಸಿರುವ ಕ್ಷಮಾದಾನಕ್ಕೆ ಅರ್ಹರಾದವರನ್ನು ಗುರುತಿಸುವ ಪ್ರಕ್ರಿಯೆಯನ್ನು ಆಂತರಿಕ ಸಚಿವಾಲಯ ಆರಂಭಿಸಿದೆ. ಗಂಭೀರವಲ್ಲದ ಸಾರ್ವಜನಿಕ ಕಾನೂನು ಉಲ್ಲಂಘನೆಗಳಿಗಾಗಿ ಕಾನೂನು ಕ್ರಮವನ್ನು ಎದುರಿಸುತ್ತಿರುವವರಿಗೆ ಪ್ರಯೋಜನವಾಗಲಿದೆ.

ಕ್ಷಮಾದಾನಕ್ಕೆ ಅರ್ಹರಾಗಿರುವವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಂತರಿಕ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸಊದ್ ಬಿನ್ ನಾಯಿಫ್ ಕಾರಾಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕ್ರಮವು ದೊರೆ ಸಲ್ಮಾನ್ ಅವರ ಘೋಷಣೆಯ ತ್ವರಿತ ಅನುಷ್ಠಾನದ ಭಾಗವಾಗಿದೆ. ಕ್ಷಮಾದಾನಕ್ಕೆ ಅರ್ಹರಾದವರನ್ನು ಗುರುತಿಸಲು ಪ್ರತಿ ಪ್ರಾಂತ್ಯದಲ್ಲೂ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಇದರಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಸೇರಿಸಲಾಗಿದೆ.

ಕೊಲೆ, ದೇಶದ್ರೋಹ, ಭಯೋತ್ಪಾದನೆ ಮುಂತಾದ ಗಂಭೀರ ಪ್ರಕರಣವನ್ನು ಹೊರತುಪಡಿಸಿ, ಸಾಮಾನ್ಯ ಕಾನೂನು ಉಲ್ಲಂಘನೆಗಳಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕೈದಿಗಳನ್ನು ಕ್ಷಮಾದಾನಕ್ಕೆ ಪರಿಗಣಿಸಲಾಗುತ್ತದೆ. ಸಂಚಾರ ಉಲ್ಲಂಘನೆ, ಸೈಬರ್ ಅಪರಾಧಗಳು, ಆರ್ಥಿಕ ಅಕ್ರಮಗಳು, ನೈತಿಕತೆ, ಕಳ್ಳತನ ಪ್ರಕರಣಗಳು ಮತ್ತು ವಸತಿ ಉಲ್ಲಂಘನೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪುರುಷರು ಮತ್ತು ಮಹಿಳೆಯರಿಗೆ ಇದರ ಪ್ರಯೋಜನ ಲಭಿಸಲಿದೆ.