janadhvani

Kannada Online News Paper

ಶುಭ ಸುದ್ದಿ: ಸೌದಿ ಮಲ್ಟಿಪಲ್ ವಿಸಿಟ್ ವೀಸಾ- ಅರ್ಜಿ ಸಲ್ಲಿಸುವ ವ್ಯವಸ್ಥೆ ಮರುಸ್ಥಾಪನೆ

ಕುಟುಂಬ, ವ್ಯಾಪಾರ ಮತ್ತು ವೈಯಕ್ತಿಕ ಸಂದರ್ಶಕರ ವೀಸಾಗಳಿಗೆ ಈಗ ಬಹು ಪ್ರವೇಶ ಲಭ್ಯವಿದೆ

ಜಿದ್ದಾ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಸೌದಿ ಮಲ್ಟಿಪಲ್ ವಿಸಿಟ್ ವೀಸಾಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ಮಂಗಳವಾರ ಸಂಜೆ ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೀಸಾ ವೇದಿಕೆಯಲ್ಲಿ ಮಲ್ಟಿಪಲ್ ವಿಸಿಟ್ ವೀಸಾಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಮತ್ತೆ ಸ್ಥಾಪಿಸಲಾಗಿದೆ.

ಕುಟುಂಬ, ವ್ಯಾಪಾರ ಮತ್ತು ವೈಯಕ್ತಿಕ ಸಂದರ್ಶಕರ ವೀಸಾಗಳಿಗೆ ಈಗ ಬಹು ಪ್ರವೇಶ ಲಭ್ಯವಿದೆ. ಮೂರು ತಿಂಗಳವರೆಗೆ ಸೌದಿ ಅರೇಬಿಯಾದಲ್ಲಿ ಉಳಿದುಕೊಂಡ ನಂತರ ಬಹು ಸಂದರ್ಶಕರ ವೀಸಾವನ್ನು ಒಂದು ವರ್ಷದವರೆಗೆ ನವೀಕರಿಸಬಹುದಾಗಿದೆ. ಆದರೆ, ಇಂದು ನೀಡಲಾದ ಕೆಲವು ವಿಸಿಟ್ ವೀಸಾಗಳಲ್ಲಿ 2025 ಏಪ್ರಿಲ್ 13 ಕ್ಕಿಂತ ಮುಂಚಿತವಾಗಿ ಸೌದಿ ಆರೇಬಿಯಾವನ್ನು ತೊರೆಯುವಂತೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಸಂದರ್ಶಕ ವೀಸಾಗಳಲ್ಲಿ ಸೌದಿ ಅರೇಬಿಯಾದಲ್ಲಿ ತಂಗಬಹುದಾದ ದಿನಗಳನ್ನು ಉಲ್ಲೇಖಿಸಲಾಗುತ್ತದೆ. ಇಂದು ನೀಡಲಾದ ಕೆಲವು ವೀಸಾಗಳಲ್ಲಿ ಸೌದಿಯಿಂದ ಮರಳಬೇಕಾದ ದಿನಾಂಕವನ್ನು ಉಲ್ಲೇಖಿಸಲಾಗಿದ್ದು, ಆ ದಿನಾಂಕದ ಮುಂಚಿತವಾಗಿ ದೇಶವನ್ನು ತೊರೆಯಬೇಕಾಗಿದೆ. ಇದು ಹಲವು ವಲಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವರಿಗೆ ಮೂರು ತಿಂಗಳು ತಂಗಬಹುದಾದ ಮಲ್ಟಿಪಲ್ ಎಂಟ್ರಿ ಫ್ಯಾಮಿಲಿ ವಿಸಿಟ್ ವೀಸಾ ಲಭಿಸಿದೆ.

ಸೌದಿ ಅರೇಬಿಯಾದಲ್ಲಿ ಬಹು ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ್ದರಿಂದ ತಮ್ಮ ಕುಟುಂಬಗಳನ್ನು ಶಾಲೆಯ ರಜಾದಿನಗಳಲ್ಲಿ ಸೌದಿ ಅರೇಬಿಯಾಕ್ಕೆ ಕರೆತರಲು ತಯಾರಿ ನಡೆಸುತ್ತಿರುವ ವಲಸಿಗರಿಗೆ ನಿರಾಶೆಯನ್ನುಂಟು ಮಾಡಿತ್ತು. ಭಾರತ, ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳ ಜನರಿಗೆ ಮಲ್ಟಿಪಲ್ ವೀಸಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಸಂದರ್ಶಕ ವೀಸಾ ಹೊಂದಿರುವವರಿಗೆ 2025 ಏಪ್ರಿಲ್ 29ರಿಂದ ಜೂನ್ 11ರ ವರೆಗೆ ಮಕ್ಕಾ ಪ್ರವೇಶವನ್ನು ನಿಷೇಧಿಸಲಾಗಿದೆ. ಹಜ್ ಋತುವಿನಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವ ಮತ್ತು ಪರವಾನಗಿ ರಹಿತ ಅನಧಿಕೃತ ಹಜ್ಜ್ ನ್ನು ತಡೆಯುವ ಭಾಗವಾಗಿ ಸಂದರ್ಶಕ ವೀಸಾದಲ್ಲಿ ಮಕ್ಕಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ.