ಮನಾಮ | ಬಹ್ರೈನ್ ರಾಜಧಾನಿ ಮನಾಮಾದಲ್ಲಿ ನಡೆಯಲಿರುವ ಎರಡು ದಿನಗಳ Intra-Islamic Dialogue Conference (ಅಂತರ್-ಇಸ್ಲಾಮಿಕ್ ಸಂವಾದ ಸಮ್ಮೇಳನ) ದಲ್ಲಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ, ಮಅದಿನ್ ಅಕಾಡೆಮಿ ಅಧ್ಯಕ್ಷ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಭಾಗವಹಿಸಿದ್ದಾರೆ. ಬಹ್ರೈನ್ ಗೆ ಆಗಮಿಸಿದ ಭಾರತೀಯ ಅತಿಥಿಗಳನ್ನು ದೊರೆ ಹಮದ್ ಬಿನ್ ಇಸಾ ಅಲ್ ಖಲೀಫಾ ಬರಮಾಡಿಕೊಂಡರು.
ಈಜಿಪ್ಟ್ನ ಅಲ್-ಅಝ್ಹರ್ ವಿಶ್ವವಿದ್ಯಾಲಯ, ಬಹ್ರೇನ್‌ನ ಧಾರ್ಮಿಕ ವ್ಯವಹಾರಗಳ ಇಲಾಖೆ ಮತ್ತು ಅಬುಧಾಬಿ ಮೂಲದ ಮುಸ್ಲಿಂ ಹಿರಿಯರ ಮಂಡಳಿಯು ಬಹ್ರೈನ್ ನ ದೊರೆ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರ ಆಶ್ರಯದಲ್ಲಿ ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸುತ್ತಿದೆ. ‘ಒಂದು ಸಮುದಾಯ, ಒಗ್ಗಟ್ಟಿನ ಪ್ರಗತಿ’ ಎಂಬ ವಿಷಯದ ಅಡಿಯಲ್ಲಿ, ವಿವಿಧ ದೇಶಗಳಲ್ಲಿ ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವಿವಿಧ ಪಂಗಡಗಳ ನಡುವೆ ಏಕತೆ ಮತ್ತು ಸ್ನೇಹ ಸಂವಾದವನ್ನು ಸುಗಮಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ.
ಇಸ್ಲಾಮಿಕ್ ರಾಷ್ಟ್ರಗಳು ಎದುರಿಸುತ್ತಿರುವ ಸನ್ನಿವೇಶಗಳು ಮತ್ತು ಬಿಕ್ಕಟ್ಟುಗಳ ಸಂದರ್ಭದಲ್ಲಿ, 2022ರ ಸಂವಾದದಲ್ಲಿ ಅಲ್-ಅಝ್ಹರ್ ಗ್ರ್ಯಾಂಡ್ ಇಮಾಮ್ ಡಾ.ಅಹ್ಮದ್ ಅಲ್-ತಯ್ಯಬ್ ಅವರು ನಡೆಸಿದ ಆಹ್ವಾನದ ಮೇರೆಗೆ ವಿವಿಧ ಕ್ಷೇತ್ರಗಳ ಮುಸ್ಲಿಂ ನಾಯಕರನ್ನು ಒಟ್ಟುಗೂಡಿಸುವ ಈ ವೇದಿಕೆಯನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ಧಾರ್ಮಿಕ ವಿದ್ವಾಂಸರು, ರಾಷ್ಟ್ರೀಯ ನಾಯಕರು, ರಾಜತಾಂತ್ರಿಕರು ಮತ್ತು ವಿಶ್ವವಿದ್ಯಾಲಯದ ಮುಖ್ಯಸ್ಥರು ಸೇರಿದಂತೆ ಪ್ರಪಂಚದಾದ್ಯಂತದ 400 ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಪೂರ್ವ ಮತ್ತು ಪಶ್ಚಿಮದ ಮುಸ್ಲಿಮರ ನಡುವೆ ಐಕ್ಯತೆಗೆ ವಿಶಾಲವಾದ ವೇದಿಕೆಯನ್ನು ಸೃಷ್ಟಿಸುವುದು ಮತ್ತು ಈ ಮೂಲಕ ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷಗಳನ್ನು ಪರಿಹರಿಸುವುದು ಈ ಸಮ್ಮೇಳನದ ಗುರಿಯಾಗಿದೆ. ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಅಲ್-ಅಝ್ಹರ್ ಗ್ರ್ಯಾಂಡ್ ಇಮಾಮ್ ಡಾ. ಅಹ್ಮದ್ ಅಲ್-ತಯ್ಯಬ್ ಮತ್ತು ಕಝಾಕಿಸ್ತಾನ್ ಸ್ಪೀಕರ್ ಮೌಲನ್ ಅಸಿಂಬೇವ್ ಸೇರಿದಂತೆ ಪ್ರಮುಖ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುವ ಅಧಿವೇಶನದಲ್ಲಿ ಭಾರತೀಯ ಗ್ರ್ಯಾಂಡ್ ಮುಫ್ತಿ ಮುಸ್ಲಿಂ ಸಮುದಾಯದಲ್ಲಿ ಏಕತೆಯ ಮಹತ್ವದ ಕುರಿತು ಮಾತನಾಡಲಿದ್ದಾರೆ.