ಖಿದ್ಮಾ ಫೌಂಡೇಶನ್ ಕುಂದಾಪುರ ಇದರ ವತಿಯಿಂದ ತೌಹೀದ್ ಎಜುಕೇಷನ್ ಟ್ರಸ್ಟ್ ಗಂಗೊಳ್ಳಿ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ನಂತರ ಮುಂದೇನು? ಎಂಬ ಗೊಂದಲದಲ್ಲಿ ಇರುತ್ತಾರೆ. ಅವರಿಗೆ ಮಾಹಿತಿಯ ಕೊರತೆ ಇರುತ್ತದೆ ಮತ್ತು ಸರಿಯಾದ ಮಾರ್ಗದರ್ಶನ ಸಿಗುವುದಿಲ್ಲ, ಅದರಿಂದ ಕೆಲವೊಮ್ಮೆ ಅವರು ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುತ್ತಾರೆ. ಈ ನಿಟ್ಟಿನಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯ ಸಭಾಂಗಣದಲ್ಲಿ ಅಧ್ಯಕ್ಷರಾದ ಶೇಖ್ ಅಬು ಮುಹಮ್ಮದ್ ಕುಂದಾಪುರರವರ ಅಧ್ಯಕ್ಷತೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾರ್ಗದರ್ಶನ ನೀಡಲು “ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಮುಂದೇನು?” ಎಂಬ ವಿಷಯದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲಾಯಿತು.
ಇದರಲ್ಲಿ ಕೌನ್ಸಿಲರ್ ಮತ್ತು ವೃತ್ತಿ ಮಾರ್ಗದರ್ಶಕರಾಗಿ ಡಾ. ಸಯ್ಯದ್ ಅಮೀನ್ ಅಹ್ಮದ್ (ನಿರ್ದೇಶಕರು, ಪಿ. ಎ. ಇಂಜಿನಿಯರಿಂಗ್ ಕಾಲೇಜು, ಮಂಗಳೂರು) ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಮೌಲಾನಾ ಝಮೀರ್ ಅಹ್ಮದ್ ರಶಾದಿಯವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ವಿದ್ಯಾರ್ಥಿಗಳು ದೇಶ ಮತ್ತು ಸಮುದಾಯದ ಭವಿಷ್ಯದ ಅಮೂಲ್ಯ ಆಸ್ತಿಯಾಗಿದ್ದಾರೆ. ಅವರ ಸರಿಯಾದ ಶಿಕ್ಷಣ ಮತ್ತು ತರಬೇತಿಯಿಂದ ಮಾತ್ರ ಸಮಾಜದ ಕಲ್ಯಾಣ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಬದುಕಿಗೊಂದು ಸ್ಪಷ್ಟ ಉದ್ದೇಶವನ್ನು ಇಟ್ಟುಕೊಂಡು ವ್ಯರ್ಥ ಕೆಲಸಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳದೆ ಮುನ್ನಡೆಯ ಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಕೂಡ ಪ್ರಧಾನವಾದುದು ಎಂದು ಹೇಳಿದರು.
ವಿದ್ಯಾರ್ಥಿ ಅಬ್ದುಲ್ಲಾ ತಖೀರವರ ಕುರ್ ಆನ್ ಪಠಣ ದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಸ್ಗರ್ ಅಲಿ ಬಸ್ರೂರು ಸ್ವಾಗತಿಸಿದರು. ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯ ಮುಖ್ಯೋಪಾಧ್ಯಾಯಿನಿ ಸಬಾ ಬಾನು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ನಿರೂಪಿಸಿದರು. ಈ ಸಂದರ್ಭದಲ್ಲಿ ತೌಹೀದ್ ಎಜುಕೇಶನ್ ಟ್ರಸ್ಟ್ ಗಂಗೊಳ್ಳಿಯ ಕೋಶಾಧಿಕಾರಿ ಶೇಖ್ಜಿ ಅಬ್ದುಲ್ ಹಮೀದ್ ಶಿರೂರು, ಮೆನೇಜರ್ ತಾಹಿರ್, ಟ್ರಸ್ಟಿ ಇಕ್ಬಾಲ್ ಕುಂದಾಪುರ, ಕಾರ್ಯಕ್ರಮದ ಸಂಚಾಲಕರಾದ ಬಿ. ಹೆಚ್. ಸೈಫುದ್ದೀನ್, ಖಿದ್ಮಾ ಫೌಂಡೇಶನ್ ಕೋಶಾಧಿಕಾರಿ ಮುಹಮ್ಮದ್ ಹನೀಫ್ ಕುಂದಾಪುರ, ಸದಸ್ಯರುಗಳಾದ ಅಬ್ದುರ್ರಹ್ಮಾನ್ ಶಿರೂರು, ಅಬ್ದುಲ್ ಹಮೀದ್ ಬಸ್ರೂರು, ಇರ್ಫಾನ್ ನಾಗೂರು, ಅಶ್ರಫ್ ನಾಗೂರು, ಇಬ್ರಾಹಿಮ್ ಬೇದ್ರೆ, ಮುಹಮ್ಮದ್ ಅಸ್ಲಮ್ ತಲ್ಲೂರು ಹಾಗೂ ಇತರರು ಉಪಸ್ಥಿತರಿದ್ದರು.