janadhvani

Kannada Online News Paper

ಶಾಸಕಾಂಗ ಸಭೆಯಲ್ಲಿ ಕಣ್ಣೀರಿಟ್ಟ ಸಿದ್ದರಾಮಯ್ಯ, ನಮ್ಮ ಸರ್ಕಾರ ರಚನೆ ಆಗೋದು ನಿಶ್ಚಿತ -ಯು.ಟಿ. ಖಾದರ್

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ಶಾಸಕರು ಕಣ್ಣೀರು ಹಾಕಿದ್ದಾರೆ.‘ರಾಜ್ಯದಲ್ಲಿ ನಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದೇವೆ. ಆದರೂ ಮತ್ತೊಮ್ಮೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಬಂದಾಗ ಬಹುತೇಕ ಶಾಸಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದರು.

‘ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲವೇ ಈ ಸೋಲಿಗೆ ಕಾರಣ. ಕೆಲ ಕಡೆ ಗೆಲ್ಲುವ ಅಭ್ಯರ್ಥಿಗಳು ಇದ್ದರೂ ಅಂತಹವರಿಗೆ ಟಿಕೆಟ್ ನೀಡಲಿಲ್ಲ. ಕೇವಲ ಪ್ರಭಾವಿ ನಾಯಕರ ಹಿಂಬಾಲಕರಾಗಿದ್ದಕ್ಕೆ ಟಿಕೆಟ್ ನೀಡಿದ್ದು ದೊಡ್ಡ ತಪ್ಪಾಗಿದೆ. ಈ ತಪ್ಪಿನಿಂದಾಗಿಯೇ ನಾವು ಈ ಪರಿಸ್ಥಿತಿಗೆ ಬಂದು ನಿಂತಿದ್ದೇವೆ’ ಎಂದು  ಶಾಸಕರು ಅಸಮಾಧಾನ ಹೊರಹಾಕಿದರು.

ರೆಸಾರ್ಟ್ ರಾಜಕೀಯ ಇಲ್ಲ: ಖಾದರ್
ಕಾಂಗ್ರೆಸ್‌ನಲ್ಲಿ ರೆಸಾರ್ಟ್ ರಾಜಕೀಯ ಇಲ್ಲ. ನಮ್ಮ ಮುಖಂಡರು ಹೇಳಿದ ರೀತಿ ನಡೆದುಕೊಳ್ಳುತ್ತೇವೆ. ನಿನ್ನೆ ತಾನೇ ಫಲಿತಾಂಶ ಬಂದಿದೆ. ಹಾಗಾಗಿ ಕೆಲವರು ಸಭೆಗೆ ಬಂದಿಲ್ಲ. ಎಲ್ಲರೂ ನಮ್ಮ ಜತೆಗಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಉಸ್ತುವಾರಿಗಳು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಸರ್ಕಾರ ರಚನೆ ಆಗೋದು ನಿಶ್ಚಿತ ಎಂದು ಕಾಂಗ್ರೆಸ್‌ ನಾಯಕ ಯು.ಟಿ.ಖಾದರ್ ಹೇಳಿದರು.

‘ಅವಕಾಶ ನೀಡದಿದ್ದರೆ ಕಾನೂನು ಹೋರಾಟ’: ರಾಜ್ಯಪಾಲರು ನಮಗೆ ಅವಕಾಶ ನೀಡಿಲ್ಲ ಅಂದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಅವಕಾಶ ನೀಡುವುದಾದರೆ ಗೋವಾ, ಮಣಿಪುರದಲ್ಲಿ ಯಾಕೆ ನೀಡಲಿಲ್ಲ? ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಿರ್ಧಾರಂತೆ ನಡೆದುಕೊಳ್ಳಲು ಆಗಲ್ಲ. ರಾಜ್ಯಪಾಲರು ಅವಕಾಶ ನೀಡಲಿಲ್ಲ ಅಂದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

error: Content is protected !! Not allowed copy content from janadhvani.com