janadhvani

Kannada Online News Paper

ವಿದ್ಯಾರ್ಥಿಗಳ ಟೂರ್ ಬಸ್ ಅಪಘಾತ: 9 ಮಂದಿ ದಾರುಣ ಅಂತ್ಯ- ಪ್ರಧಾನಿ ಸಂತಾಪ

ಬೆಸಿಲಿಯಸ್ ಶಾಲೆಯ 10, 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳನ್ನು ಊಟಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪಾಲಕ್ಕಾಡ್: ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾದ ಪರಿಣಾಮ 5 ವಿದ್ಯಾರ್ಥಿಗಳು ಸೇರಿ ಒಂಭತ್ತು ಜನರು ದಾರುಣವಾಗಿ ನಿಧನ ಹೊಂದಿದ್ದಾರೆ. ಪಾಲಕ್ಕಾಡ್‌ನ ವಡಕಂಚೇರಿ ಸಮೀಪ ಈ ಅವಘಡ ಸಂಭವಿಸಿದೆ. ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್( KSRTC) ಹಾಗೂ ಮಕ್ಕಳಿದ್ದ ಪ್ರವಾಸಿ ಬಸ್(Tourist Bus) ಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಎರಡೂ ಬಸ್‌ಗಳು ನಜ್ಜುಗುಜ್ಜಾಗಿವೆ. ಎರ್ನಾಕುಲಂನ ಮುಲಂತುರುತಿ ಎಂಬಲ್ಲಿಯ ಬೆಸಿಲಿಯಸ್ ಶಾಲೆಯ ಮಕ್ಕಳು ಈ ಬಸ್‌ನಲ್ಲಿ ಪ್ರವಾಸ ಹೊರಟ್ಟಿದ್ದರು. ಪ್ರವಾಸಿ ಬಸ್ ಕಾರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಕೆಎಸ್ಆರ್‌ಟಿಸಿ(KSRTC) ಬಸ್‌ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ.

ರಾಜ್ಯ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪ್ರವಾಸಿ ಬಸ್ ನಂತರ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಕೆಸರು ತುಂಬಿದ ಜೌಗು ಪ್ರದೇಶಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಒಂಭತ್ತು ಮಂದಿ ಮರಣ ಹೊಂದಿದ್ದಾರೆ. ಅಂಜುಮೂರ್ತಿ ಮಂಗಲಮ್ ಬಸ್ ನಿಲ್ದಾಣದ ಸಮೀಪ, ವಲಯನ್ -ವಡಕೆಂಚೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅನಾಹುತ ಸಂಭವಿಸಿದೆ. ಈ ಅವಘಡದಲ್ಲಿ 12 ಜನ ಗಂಭೀರ ಗಾಯಗೊಂಡಿದ್ದಾರೆ, 28 ಜನ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಪ್ರವಾಸಿ ಬಸ್‌ನಲ್ಲಿ (Tourist Bus)ಒಟ್ಟು 41 ವಿದ್ಯಾರ್ಥಿಗಳು, ಐದು ಶಿಕ್ಷಕರು ಹಾಗೂ ಇಬ್ಬರು ಬಸ್‌ ಸಿಬ್ಬಂದಿ ಇದ್ದರು. ಹಾಗೆಯೇ ರಾಜ್ಯ ಸಾರಿಗೆ ಬಸ್‌ನಲ್ಲಿ 49 ಪ್ರಯಾಣಿಕರಿದ್ದರು.

ಮೃತರಲ್ಲಿ ಮೂವರು ಕೆಎಸ್ಆರ್‌ಟಿಸಿ ಬಸ್ ಪ್ರಯಾಣಿಕರು, ಐವರು ಪ್ರವಾಸಿ ಬಸ್‌ನಲ್ಲಿದ್ದವರು. ಒಟ್ಟು ಆರು ಪುರುಷ ಹಾಗೂ 3 ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಸಾರಿಗೆ ಬಸ್‌ನಲ್ಲಿ ಸಂಚರಿಸುತ್ತಿದ್ದ ತ್ರಿಶೂರ್‌ನ 24 ವರ್ಷದ ರೋಹಿತ್ ರಾಜ್‌, ಕೊಲ್ಲಂನ 22 ವರ್ಷದ ಅನೂಪ್, ಶಾಲಾ ಸಿಬ್ಬಂದಿಯಾದ ನ್ಯಾನ್ಸಿ ಜಾರ್ಜ್‌, ವಿಕೆ ವಿಷ್ಣು ಗುರುತು ಪತ್ತೆಯಾಗಿದೆ. ಹಾಗೆಯೇ ಸಾವಿನ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳುಗಳನ್ನು ಪಾಲಕ್ಕಾಡ್‌ ಜಿಲ್ಲಾ ಆಸ್ಪತ್ರೆಗೆ (Palakkad district Hospital) ದಾಖಲಿಸಲಾಗಿದೆ. ಹಾಗೆಯೇ ಮೃತಪಟ್ಟವರ ಶರೀರವನ್ನು ಅಲ್ತೂರ್ ಹಾಗೂ ಪಾಲಕ್ಕಾಡ್‌ನ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಬೆಸಿಲಿಯಸ್ ಶಾಲೆಯ 10, 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳನ್ನು ಊಟಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 26 ಬಾಲಕರು 16 ಬಾಲಕಿಯರು ಈ ಶಾಲಾ ಪ್ರವಾಸಿ ಬಸ್‌ನಲ್ಲಿದ್ದರು. ಶಾಲಾ ಬಸ್‌ನ ಅತೀಯಾದ ವೇಗ ಹಾಗೂ ಸುರಿಯುತ್ತಿದ್ದ ಮಳೆಯೂ ಅಪಘಾತದ ತೀವ್ರತೆ ಹೆಚ್ಚಲು ಕಾರಣವಾಗಿದೆ.

ರಾಷ್ಟ್ರಪತಿ ಮತ್ತು ಪ್ರಧಾನಿ ಸಂತಾಪ

ದೆಹಲಿ: ಪಾಲಕ್ಕಾಡ್ ವಡಕಂಚೇರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿಯವರು ಆರ್ಥಿಕ ಸಹಾಯವನ್ನೂ ಘೋಷಿಸಿದರು. ಪ್ರಧಾನಮಂತ್ರಿಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

error: Content is protected !! Not allowed copy content from janadhvani.com