ನ್ಯೂಯಾರ್ಕ್: ‘ಭಾರತದ ಕಂಪನಿಯೊಂದು ತಯಾರಿಸಿರುವ ನಾಲ್ಕು ಕಲುಷಿತ ಕಫ್ ಸಿರಪ್‌ಗಳನ್ನು (Cough Syrup) ಸೇವಿಸಿ ಪಶ್ಚಿಮ ಆಫ್ರಿಕಾದಲ್ಲಿನ ಗಾಂಬಿಯಾ ದೇಶದ 66 ಮಕ್ಕಳು ಅಸುನೀಗಿದ್ದಾರೆ ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (WHO) ಬುಧವಾರ ಆರೋಪಿಸಿದೆ.
ನವದೆಹಲಿ ಮೂಲದ ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್(Maiden Pharmaceuticals limted) ತಯಾರಿಸಿರುವ ಈ ಸಿರಪ್‌ಗಳನ್ನು ಮಕ್ಕಳಲ್ಲಿ ಕೆಮ್ಮು ಮತ್ತು ಶೀತನಿವಾರಕವಾಗಿ ಬಳಸಲಾಗುತ್ತಿದೆ. ಈ ಸಿರಪ್‌ಗಳು ವಿಷಕಾರಿ ಹಾಗೂ ಮಾರಣಾಂತಿಕ ರಾಸಾಯನಿಕಗಳನ್ನು ಹೊಂದಿವೆ ಎಂದು ಡಬ್ಲ್ಯುಎಚ್‌ಒ (WHO) ಅಭಿಪ್ರಾಯಪಟ್ಟಿದೆ.
ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ (The WHO identified the medicines as Promethazine Oral Solution, Kofexmalin Baby Cough Syrup, Makoff Baby Cough Syrup and Magrip N Cold Syrup) ಹೆಸರಿನ ಈ ಎಲ್ಲಾ ಸಿರಪ್‌ಗಳನ್ನು ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿ. ತಯಾರಿಸಿದೆ ಎಂದು ಡಬ್ಲ್ಯುಎಚ್‌ಒ ವೈದ್ಯಕೀಯ ಉತ್ಪನ್ನಗಳ ಎಚ್ಚರಿಕೆ ಪ್ರಕಟಣೆಯು ತಿಳಿಸಿದೆ.
‘ಗಾಂಬಿಯಾದಲ್ಲಿ ಗುರುತಿಸಲಾಗಿರುವ ಈ ನಾಲ್ಕು ಕಲುಷಿತ ಔಷಧಿಗಳನ್ನು ಸೇವಿಸಿದ 66 ಮಕ್ಕಳಲ್ಲಿ ತೀವ್ರತರವಾದ ಮೂತ್ರಪಿಂಡದ ಸಮಸ್ಯೆ, ವಾಂತಿ, ಹೊಟ್ಟೆನೋವು, ಅತಿಸಾರ, ತಲೆನೋವು ಕಾಣಿಸಿಕೊಂಡಿತ್ತು. ಈ ಮಕ್ಕಳ ಜೀವ ನಷ್ಟವು ಅವರ ಕುಟುಂಬಗಳ ಪಾಲಿಗೆ ದೊಡ್ಡ ನೋವು ನೀಡಿದೆ’ ಎಂದೂ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಸರಣಿ ಟ್ವೀಟ್ ಮಾಡಿದ್ದಾರೆ.