ಮಡಿಕೇರಿ: ಸಮಾಜದಲ್ಲಿ ವಿದ್ಯಾಭ್ಯಾಸದ ಮೂಲಕ ಮಾತ್ರವೇ ಕ್ರಾಂತಿ ಸೃಷ್ಟಿಸಲು ಸಾಧ್ಯ , ಸಮಾಜದಲ್ಲಿರುವ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸುವವರಾಗಬೇಕೆಂದು ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ ಎ ಅಬ್ದುಲ್ಲಾ ಅವರು ಕರೆ ನೀಡಿದರು. ಕೊಡಗು ಜಿಲ್ಲಾ ಎಸ್ಸೆಸ್ಸೆಫ್ ಆಯೋಜಿಸಿದ್ದ ಕ್ಯಾಂಪಸ್ ಅಸೆಂಬ್ಲಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಮಡಿಕೇರಿ ತಾಲೂಕಿನ ಕೊಟ್ಟಮುಡಿಯಲ್ಲಿ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿಯು ‘ನೈತಿಕತೆ- ಸಮಗ್ರತೆ-ಸಮರ್ಪಣೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಕಳೆದ ಜುಲೈ 03 ರಂದು ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮ ಆಯೋಜಿಸಿತ್ತು .ಕೊಡಗು ಜಿಲ್ಲಾ ಸಹಾಯಕ ಖಾಝಿ ಶಾದುಲಿ ಫೈಝಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾಕೋಬ್ ಮಾಸ್ಟರ್ ಅವರು ಪ್ರಸ್ತುತ ಸನ್ನಿವೇಶದಲ್ಲಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಸ್ಪರ ಅಪಾರ್ಥಗಳಿಗೆ ಈಡಾಗುತ್ತಿದ್ದು ಪ್ರಸ್ತುತ ಕಾರ್ಯಕ್ರಮವು ಅಂತಹ ಸಮಸ್ಯೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದರು.ಅಧ್ಯಕ್ಷೀಯ ಭಾಷಣವನ್ನು ಮಾಡಿದ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫೀ ಸಅದಿ ಅವರು ರಾಜಕೀಯ ಲಾಭಗಳಿಗಾಗಿ , ವೈಯುಕ್ತಿಕ ದುರಾಸೆಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲಾಗುತ್ತಿದೆ ಇದನ್ನು ಅರಿತು ವಿದ್ಯಾರ್ಥಿಗಳು ಸಮಾಜದ ಮುಂದೆ ಮಾದರಿಯುತವಾಗಿ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಪಿ ಡಿ ಒ ಅಬ್ದುಲ್ಲಾ ಎಂ ಎಂರವರನ್ನು ಸನ್ಮಾನಿಸಲಾಯಿತು.ಕೊಡಗು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತ ಕೋರಿ ಸಹಾಯಕ ಕಾರ್ಯದರ್ಶಿ ಇಬ್ರಾಹಿಂ ಮಾಸ್ಟರ್ ವಂದಿಸಿದರು.