janadhvani

Kannada Online News Paper

ರೈತರ ಹತ್ಯೆ: ಭುಗಿಲೆದ್ದ ಹಿಂಸಾಚಾರ- ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ

ಲಕ್ನೋ, ಅ.04; ಭಾನುವಾರ ಉತ್ತರಪ್ರದೇಶದ ಲಖೀಮ್ಪುರ್ Lakhimpur ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನ ರೈತರು ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದರು. ಆದರೆ, ನಿನ್ನೆ ಘಟನೆಯ ನಂತರ ಕಾಣೆಯಾಗಿದ್ದ ಸ್ಥಳೀಯ ಪತ್ರಕರ್ತನೊಬ್ಬ ಇಂದು ಮೃತಪಟ್ಟಿರುವುದು ಧೃಡವಾಗಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿದೆ.

ಈ ನಡುವೆ ಇಂದು ಮುಂಜಾನೆ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಪ್ರಿಯಾಂಕ ಗಾಂಧಿಯನ್ನು ಬಂಧಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ, ಅಖಿಲೇಶ್ ಯಾದವ್ ಘಟನೆಯನ್ನು ಖಂಡಿಸಿ ರಸ್ತೆಗಿಳಿದು ಹೋರಾಟ ನಡೆಸಿದ ಪರಿಣಾಮ ಇದೀಗ ಅವರನ್ನೂ ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ನಿನ್ನೆ ಉತ್ತರ ಪ್ರದೇಶದ ಲಖೀಮ್ಪುರ್ಗೆ ಆಗಮಿಸಿದ್ದರು. ಆದರೆ, ಅವರ ಈ ಭೇಟಿಯನ್ನು ತಡೆಯುವ ಸಲುವಾಗಿ ರೈತ ಪ್ರತಿಭಟನಾಕಾರರು ಹೆಲಿಪ್ಯಾಡ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ಘಟನೆಯಲ್ಲಿ ಅನೇಕ ರೈತರು ಮೃತಪಟ್ಟಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕಾರ, ಮೃತಪಟ್ಟ ನಾಲ್ವರು ರೈತರನ್ನು ಸುಖ್ವಿಂದರ್ ಸಿಂಗ್ (20), ಸತ್ನಾಮ್ ಸಿಂಗ್ (20), ಹರಿ ಸಿಂಗ್ (35) ಮತ್ತು ಸುಬ್ಬ ಸಿಂಗ್ (65) ಎಂದು ಗುರುತಿಸಲಾಗಿದೆ. ಈ ಘಟನೆ ನಂತರ ಲಖೀಮ್ಪುರ್ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ.

ಧರಣಿ ವೇಳೆ ಮಾಧ್ಯಮಗಳ ಎದುರು ಮಾತನಾಡಿರುವ ಮಾಜಿ ಸಿಎಂ ಅಖಿಲೇಶ್ ಯಾದವ್, “ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಅವರನ್ನು ಕೂಡಲೇ ಆ ಸ್ಥಾನದಿಂದ ಕಿತ್ತೊಗೆಯಬೇಕು. ಅಲ್ಲದೆ, ಘಟನೆಯಲ್ಲಿ ಮೃತಪಟ್ಟ ಅಮಾಯಕ ರೈತರಿಗೆ ಕನಿಷ್ಟ 2 ಕೋಟಿ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com