janadhvani

Kannada Online News Paper

ನಾರ್ಕೋಟಿಕ್ ಜಿಹಾದ್, ಲವ್ ಜಿಹಾದ್ ಪ್ರಚಾರ ಅರ್ಥಹೀನ- ಎ.ಪಿ.ಹಕೀಂ ಅಝ್ಹರಿ

ನಾರ್ಕೋಟಿಕ್ ಜಿಹಾದ್, ಲವ್ ಜಿಹಾದ್ ಎಂಬಿತ್ಯಾದಿ ಪ್ರಚಾರವು ಅರ್ಥಹೀನವಾಗಿದೆ ಎಂದು ಕೇರಳ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬ್ದುಲ್ ಹಕೀಮ್ ಅಝ್ಹರಿ ಅವರು ಪ್ರಮುಖ ಮಲಯಾಳಂ ದೃಶ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ವಿವಾದಾತ್ಮಕ ಹೇಳಿಕೆಗಳನ್ನು ಪ್ರಚೋದನಕಾರಿಯಾಗಿ ಪ್ರತಿಕ್ರಿಯಿಸುವುದರಿಂದ ಕೋಮು ಸೌಹಾರ್ದತೆ ಹಾಳುಗೆಡವಬಹುದು.ಅದೇ ಸಮಯದಲ್ಲಿ, ಅನ್ಯಧರ್ಮೀಯರನ್ನು ವಿವಾಹ ಆಗುವುದನ್ನು ನಿಷೇಧಿಸುವ ಕಾನೂನನ್ನು ತರುವುದಾದಲ್ಲಿ ಬೆಂಬಲಿಸುವೆವು ಎಂದು ಅಬ್ದುಲ್ ಹಕೀಮ್ ಅಝ್ಹರಿ ಹೇಳಿದರು.

“ಪ್ರೇಮದ ಹೆಸರಿನಲ್ಲಿ ಹುಡುಗಿಯರನ್ನು ಮತಾಂತರಗೊಳಿಸಲಾಗುತ್ತಿದೆ ಎಂಬುದಾಗಿದೆ ಇನ್ನೊಂದು ವಿಷಯ. ಇದು ಹೆಚ್ಚಿನ ಪರಿಣಾಮ ಬೀರುತ್ತಿರುವುದು ಮುಸ್ಲಿಮರ ಮೇಲೆಯಾಗಿದೆ. ಧರ್ಮವನ್ನು ತೊರೆದು,ಹೆತ್ತವರ ಒಪ್ಪಿಗೆ ಇಲ್ಲದೆ ಮದುವೆಯಾಗಬಾರದು ಮುಂತಾದ ಕಾನೂನನ್ನು ತರುವುದಾದಲ್ಲಿ ನಾವು ಮೊದಲು ಸ್ವಾಗತಿಸುವೆವು ” ಎಂದು ಅಝ್ಹರಿ ಹೇಳಿದರು.

ನಾರ್ಕೋಟಿಕ್ ಜಿಹಾದ್ ವಿವಾದದ ಕುರಿತು ಕೇಳಿದಾಗ, ಅದು ದೈವಿಕ ಇಚ್ಛೆಯಂತೆ ನಡೆಯುತ್ತಿದೆ ಎಂದು ಅಝ್ಹರಿ ಹೇಳಿದರು. ಇಂತಹ ಸಂಭಾಷಣೆಗಳ ಮೂಲಕವೇ ಮದ್ಯ ಮತ್ತು ಮಾದಕ ವಸ್ತುಗಳ ಬಗ್ಗೆ ಇಸ್ಲಾಮಿನ ನಿಲುವೇನು ಎಂದು ಜಗತ್ತು ತಿಳಿಯಲು ಸಾಧ್ಯವಾಗಲಿದೆ. ಹೆಚ್ಚಿನ ಜನರು ಇದರ ಬಗ್ಗೆ ಅನ್ವೇಷಿಸಲು ಮತ್ತು ಕಲಿಯಲು ಪ್ರಯತ್ನಿಸುತ್ತಾರೆ.

ಮುಸ್ಲಿಮರು ಜನರನ್ನು ಮತಾಂತರಗೊಳಿಸಲು ಹೆಚ್ಚು ಪ್ರಯತ್ನಿಸುವುದಿಲ್ಲ. ಹಳೆಯ ಕಾಲದಲ್ಲಿ , ಜನರು ಸೂಫಿ ವಿದ್ವಾಂಸರು ಮತ್ತು ಇತರರ ಜೀವನವನ್ನು ನೋಡುವ ಮೂಲಕ ಇಸ್ಲಾಂ ಧರ್ಮ ಸ್ವೀಕರಿಸಿದರು. ಕುಮಾರನಾಶಾನ್ ರಂತಹವರು ವಿವಿಧ ಧರ್ಮಗಳ ದುಃಸ್ಥಿತಿ ಬಗ್ಗೆ ಹಾಡಿದರು ಆದ್ದರಿಂದ ಜನರು ಇಸ್ಲಾಂ ಧರ್ಮ ಸ್ವೀಕರಿಸಿದರು, ಅಲ್ಲದೇ, ಧರ್ಮಕ್ಕೆ ಆಹ್ವಾನಿಸುವುದಿಲ್ಲ.

ಬಾಬ್ರಿ ಮಸೀದಿ ಧ್ವಂಸವಾದ ವರ್ಷವು ಹೆಚ್ಚಿನ ಜನರು ಇಸ್ಲಾಂಗೆ ಮತಾಂತರಗೊಂಡ ವರ್ಷವಾಗಿತ್ತು. ಡೆನ್ಮಾರ್ಕ್ ನಲ್ಲಿ ಪವಿತ್ರ ಪ್ರವಾದಿಯವರನ್ನು ಅವಹೇಳನ ಮಾಡುವ ವ್ಯಂಗ್ಯಚಿತ್ರಗಳನ್ನು ಹೊರತಂದಾಗ ಹೆಚ್ಚು ಹೆಚ್ಚು ಜನರು ಇಸ್ಲಾಂ ಧರ್ಮ ಸ್ವೀಕರಿಸಿದರು.

ಪ್ರಸ್ತುತ ನಡೆಯುತ್ತಿರುವ ಆರೋಪಗಳ ಪರಿಣಾಮವಾಗಿ, ಇಸ್ಲಾಂ ಬಗ್ಗೆ ಹೆಚ್ಚು ಕಲಿಯಲು ಮತ್ತು ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ಸಾಧ್ಯತೆ ಹೆಚ್ಚು.