janadhvani

Kannada Online News Paper

ಲಸಿಕೆ ಪಡೆಯದೆ ಸೌದಿಗೆ ಆಗಮಿಸುವವರ ಕ್ವಾರಂಟೈನ್ 5 ದಿನಗಳಿಗೆ ಇಳಿಕೆ

ರಿಯಾದ್: ಕೋವಿಡ್ ಲಸಿಕೆ ತೆಗೆದುಕೊಳ್ಳದೆ ಸೌದಿ ಅರೇಬಿಯಾಕ್ಕೆ ಆಗಮಿಸುವವರಿಗೆ ಕ್ಯಾರೆಂಟೈನ್ ಅವಧಿಯನ್ನು ಐದು ದಿನಗಳಿಗೆ ಇಳಿಸಲಾಗಿದೆ.ಸೌದಿ ಅರೇಬಿಯಾಕ್ಕೆ ಆಗಮಿಸುವ ವಲಸಿಗರು ಮತ್ತು ಸಂದರ್ಶಕರಿಗೆ ಕ್ಯಾರೆಂಟೈನ್ ನಿಯಮಗಳಲ್ಲಿ ಬದಲಾವಣೆಯನ್ನು ನಾಗರಿಕ ವಿಮಾನಯಾನ ಸಾಮಾನ್ಯ ಪ್ರಾಧಿಕಾರ ಪ್ರಕಟಿಸಿದೆ. ಲಸಿಕೆ ಪಡೆಯದವರು ಅಥವಾ ಸೌದಿ ಅನುಮೋದಿತ ಕೋವಿಡ್ ಲಸಿಕೆಯ ಕೇವಲ ಒಂದು ಡೋಸ್ ತೆಗೆದುಕೊಂಡವರು ಪ್ರಯಾಣದ 72 ಗಂಟೆಗಳಲ್ಲಿ ತೆಗೆದುಕೊಂಡ ಪಿಸಿಆರ್ ಪರೀಕ್ಷೆಯ ನೆಗಟಿವ್ ಫಲಿತಾಂಶವನ್ನು ಹೊಂದಿರಬೇಕು.

ಸೌದಿ ಅರೇಬಿಯಾದಲ್ಲಿ, ಕೇವಲ ಐದು ದಿನಗಳನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಕಳೆಯಬೇಕು.ಮತ್ತೆ ಎರಡು ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು. ಮೊದಲ ತಪಾಸಣೆ ಸೌದಿ ಅರೇಬಿಯಾಕ್ಕೆ ಆಗಮಿಸಿದ 24 ಗಂಟೆಗಳಲ್ಲಿ ಮತ್ತು ಎರಡನೇ ತಪಾಸಣೆ ಸಾಂಸ್ಥಿಕ ಕ್ವಾರಂಟೈನ್‌ನ ಐದನೇ ದಿನದಂದು ನಡೆಸಬೇಕು. ಐದನೇ ದಿನ ನೆಗೆಟಿವ್ ಫಲಿತಾಂಶ ಬಂದಲ್ಲಿ,ಕ್ವಾರಂಟೈನ್ ಅನ್ನು ಕೊನೆಗೊಳಿಸಬಹುದು.

ಈ ಹಿಂದೆ ಏಳು ದಿನಗಳ ಕಡ್ಡಾಯ ಸಂಪರ್ಕತಡೆಯನ್ನು ಪೂರ್ಣಗೊಳಿಸಬೇಕಿತ್ತು. ಹೊಸ ವ್ಯವಸ್ಥೆಯು ಸೆಪ್ಟೆಂಬರ್ 23 ರಂದು ಮಧ್ಯಾಹ್ನ 12 ರಿಂದ ಜಾರಿಗೆ ಬರಲಿದೆ.

ಊರಿನಲ್ಲಿ ಲಸಿಕೆಯ ಎರಡೂ ಡೋಸ್ ಪಡೆದವರು,ಇನ್ನೊಂದು ದೇಶದಲ್ಲಿ 14 ದಿನಗಳು ಕಳೆದು ಸೌದಿಗೆ ತೆರಳಬಹುದು. ಸೌದಿ ಅರೇಬಿಯಾದಲ್ಲಿ ತಮ್ಮ ತವಕ್ಕಲ್ನಾ ಆಪ್ನಲ್ಲಿ ರೋಗನಿರೋಧಕ ಸ್ಥಿತಿಯನ್ನು ಹೊಂದಿದ್ದರೆ ಕ್ಯಾರೆಂಟೈನ್ ಅಗತ್ಯವಿಲ್ಲ. ಲಸಿಕೆ ಪಡೆಯದ ಮತ್ತು ರೋಗನಿರೋಧಕ ಸ್ಥಿತಿಯನ್ನು ಹೊಂದಿರದವರಿಗೆ ಇನ್ನೊಂದು ದೇಶದ ಸಂಪರ್ಕತಡೆಯನ್ನು ಹೊರತುಪಡಿಸಿ ಸೌದಿ ಅರೇಬಿಯಾದಲ್ಲೂ 5 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಬೇಕಿದೆ.

ಇದರ ಜೊತೆಯಲ್ಲಿ, ಲಸಿಕೆಯನ್ನು ಪೂರ್ಣಗೊಳಿಸದೆ ಆಗಮಿಸುವವರು ಸೌದಿ ಅರೇಬಿಯಾಕ್ಕೆ ಬಂದ ನಂತರ ಅಗತ್ಯವಾದ ಡೋಸ್‌ಗಳನ್ನು ಪಡೆಯಬೇಕು. ಸೌದಿ ಅರೇಬಿಯಾ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸದ ಸಿನೊಫಾರ್ಮ್ ಮತ್ತು ಸಿನೊಫ್ಯಾಕ್ ಲಸಿಕೆ ಹಾಕಿಸಿಕೊಂಡವರು ಸೌದಿಗೆ ಬಂದ ನಂತರ ಬೂಸ್ಟರ್ ಡೋಸ್ ಪಡೆಯಬೇಕು.

ವಿದೇಶದಿಂದ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಅನುಮತಿ ಪಡೆದವರು ಲಸಿಕೆ ಹಾಕಿಸದ ಮಕ್ಕಳನ್ನು ಕೂಡ ತರಬಹುದು. 18 ವರ್ಷದೊಳಗಿನ ಮಕ್ಕಳಿಗೆ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದೆ. ಮಗುವಿಗೆ ಎಂಟು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಐದನೇ ದಿನದ ಪಿಸಿಆರ್ ಪರೀಕ್ಷೆಯೂ ಕಡ್ಡಾಯವಾಗಿದೆ. ನೆಗೆಟಿವ್ ಫಲಿತಾಂಶದೊಂದಿಗೆ ಕ್ವಾರಂಟೈನ್ ಕೊನೆಗೊಳಿಸಬಹುದಾಗಿದೆ.

ಏತನ್ಮಧ್ಯೆ, ಸೌದಿ ಅರೇಬಿಯಾ ಕೋವಿಡ್‌ನ ಭಾಗವಾಗಿ ಸಂದರ್ಶಕರ ವೀಸಾಗಳನ್ನು ವಿಸ್ತರಿಸುತ್ತಿದ್ದ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಈಗ ನವೀಕರಿಸಲು ಬಯಸುವವರು ಎರಡು ವಾರಗಳಲ್ಲಿ ದೇಶವನ್ನು ತೊರೆಯುವಂತೆ ಹೇಳಲಾಗುತ್ತಿದೆ. ಹೊಸ ಸಂದರ್ಶಕರ ವೀಸಾಗಳಿಗೆ ಇದು ಅನ್ವಯಿಸುವುದಿಲ್ಲ. ಅವರು ತಮ್ಮ ವೀಸಾವನ್ನು ನವೀಕರಿಸುವ ಮೂಲಕ ದೇಶದಲ್ಲಿ ಉಳಿಯಬಹುದು.

error: Content is protected !! Not allowed copy content from janadhvani.com