ಆಹಾರ ಸ್ವಾವಲಂಬಿ ಕಾಸರಗೋಡು ಎಂಬ ಲಕ್ಷ್ಯ ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಸಾವಯವ ಕೃಷಿ ಪದ್ದತಿಗಳೊಂದಿಗೆ ಬಿಲ್ಡ್ ಅಪ್ ಕಾಸರಗೋಡ್
ಮಣ್ಣು, ನೀರು ಮತ್ತು ಗಾಳಿಯು ಭವಿಷ್ಯದ ಪೀಳಿಗೆಗೆ ಸೇರಿದೆ ಎಂಬ ಮನವರಿಕೆಯೊಂದಿಗೆ ಕಾಸರಗೋಡು ಜಿಲ್ಲೆಯು ತನ್ನ ಜೀವವೈವಿಧ್ಯತೆಯನ್ನು ಕಾಪಾಡಲು ಸಂಪೂರ್ಣ ಸಾವಯವ ಕೃಷಿಯತ್ತ ಬಿಲ್ಡ್ ಅಪ್ ಕಾಸರಗೋಡ್ ಹೆಜ್ಜೆ ಹಾಕುತ್ತಿದೆ.
ಆಧುನಿಕ ಕೃಷಿ ವಿಧಾನಗಳು ಮತ್ತು ಸಾಂಪ್ರದಾಯಿಕ ಕೃಷಿ ಜ್ಞಾನವನ್ನು ಸಂಯೋಜಿಸುವ ಹಳೆಯ ಕೃಷಿ ಸಂಸ್ಕೃತಿಯ ಜೀರ್ಣೋದ್ಧಾರದ ಅಂಗವಾಗಿ ಕಾಸರಗೋಡು ಜಿಲ್ಲೆಯ ಇರಿಯಾ ಇರಿವಾಲ್ ಗದ್ದೆಯ ಹತ್ತು ಎಕರೆ ಸ್ಥಳದಲ್ಲಿ ಸ್ಥಳೀಯ ಹಸುಗಳ ಸಗಣಿ ಮತ್ತು ಪಂಚಗವ್ಯದೊಂದಿಗೆ ಸಂಪೂರ್ಣ ಸಾವಯವ ಕೃಷಿಯನ್ನು ಪ್ರಾರಂಭಿಸಲಾಗಿದೆ. ಬಿಲ್ಡ್ ಅಪ್ ಕಾಸರಗೋಡಿನ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಪ್ರಾರಂಭಿಸಲಾದ ಈ ಯೋಜನೆ ಮುಂದಿನ ವರ್ಷ 100 ಎಕರೆ ಭೂಮಿಗೆ ವಿಸ್ತರಿಸುವ ನಿರೀಕ್ಷೆಯಿದೆ.
ಆಹಾರೋತ್ಪನ್ನಗಳನ್ನು ಜಿಲ್ಲೆಯ ಹೊರಗಿನಿಂದ ತರುವ ಪರಿಸ್ಥಿತಿಯನ್ನು ತಪ್ಪಿಸಿ ಶುದ್ಧ ವಾತಾವರಣದಲ್ಲಿಬೆಳೆದ ಔಷದ ಗುಣವುಳ್ಳ ಸ್ಥಳೀಯ ಭತ್ತದಿಂದ ತಯಾರಿಸಿದ ಅಕ್ಕಿಯನ್ನು ಪ್ಯಾಕೆಟ್ಗಳಲ್ಲಿ ಗ್ರಾಹಕರಿಗೆ ತಲುಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಣ್ಣು, ತರಕಾರಿಗಳು, ಮೀನು, ಮಾಂಸ, ಮೊಟ್ಟೆ ಮತ್ತು ಹಾಲಿನಂತಹ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಯಾವುದೇ ತುರ್ತು ಪರಿಸ್ಥಿತಿಗೆ ಕಾಸರಗೋಡು ಜಿಲ್ಲೆಯನ್ನು ಸಿದ್ಧಪಡಿಸುವ ಉದ್ದೇಶವನ್ನು ಕೂಡ ಸಂಘಟನೆ ಹೊಂದಿದೆ.
ಮೊದಲ ಯೋಜನೆಯನ್ನು ಕಳೆದ ಆದಿತ್ಯವಾರ ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಐ.ಎ.ಎಸ್ ಹೊಲದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಜೈವ ಕೃಷಿಯ ಪ್ರಾಧಾನ್ಯತೆಯನ್ನು ವಿವರಿಸುತ್ತಾ ತಾನು ಭತ್ತ ಕೃಷಿಯ ವೈವಿದ್ಯತೆಯ ಬಗ್ಗೆ ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಗಳಿಸಿದ್ದಾಗಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಡ್ ಅಪ್ ಕಾಸರಗೋಡ್ ಕಾರ್ಯಕಾರಿ ಅಧ್ಯಕ್ಷ ಶ್ರೀಮಾನ್ ಕೋಕಲ್ ಬಾಲಕೃಷ್ಣನ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಶೇಕ್ ಬಾವಾ ಮಾತನಾಡಿ ಬಿಲ್ಡ್ ಅಪ್ ಕಾಸರಗೋಡಿನ ಸಂಘಟನಾ ಉದ್ದೇಶವನ್ನು ವಿವರಿಸಿ, 2030 ರೊಳಗೆ ಜಿಲ್ಲೆಯು ವಿದ್ಯಾಭ್ಯಾಸ, ಆರೋಗ್ಯ, ಕೃಷಿ, ವ್ಯಾಪಾರ ಮತ್ತು ವಾಣಿಜ್ಯ ಸೇರಿದಂತೆ 26 ವ್ಯತ್ಯಸ್ತ ವಿಭಾಗಗಳಲ್ಲಿ ಸ್ವಾವಲಂಬಿಯಾಗುವ ಗುರಿಯನ್ನಿಟ್ಟುಕೊಂಡು ಕಾರ್ಯ ಯೋಜನೆಯನ್ನು ರೂಪಿಸಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕೃಷಿ ಅಧಿಕಾರಿ ಶ್ರೀಮತಿ ವೀಣಾ ರಾಣಿ ಸಂಘಟನೆಯ ಕಾರ್ಯ ಯೋಜನೆಯನ್ನು ಪ್ರಶಂಸಿಸುತ್ತಾ ಜಿಲ್ಲೆಯಲ್ಲಿ ಕೃಷಿ ಯೋಗ್ಯ ಭೂಮಿಗೆ ಬೇಸಾಯಕ್ಕೆ ಬೇಕಾಗುವ ಎಲ್ಲ ಸವಲತ್ತನ್ನು ನೀಡಿ ಸಹಕರಿಸೋದಾಗಿ ತಿಳಿಸಿದರು.
ಪುಲ್ಲೂರ್ ಪೆರಿಯಾ ಪಂಚಾಯತ್ ಅಧ್ಯಕ್ಷ ಶ್ರೀ ಸಿ.ಕೆ.ಅರವಿಂದಕ್ಷನ್, ಜಿಲ್ಲಾ ಕೃಷಿ ಅಧಿಕಾರಿ ಶ್ರೀ ಪ್ರಮೋದ್, ವಾರ್ಡ್ ಸದಸ್ಯೆ ರಜನಿ ನಾರಾಯಣನ್, ಬಿಲ್ಡ್ ಅಪ್ ಕಾಸರಗೋಡ್ ಕೃಷಿ ವಿಭಾಗದ ಅಧ್ಯಕ್ಷ ಮತ್ತು ಯೋಜನೆಯ ಮುಖ್ಯ ರುವಾರಿ ಶ್ರೀ ಪಿ.ಕೆ.ಲಾಲ್, ಖಜಾಂಚಿ ಶ್ರೀ ಸಾದಿಕ್ ಮಂಜೇಶ್ವರಂ, ಪ್ರವಾಸಿ ಪುನರ್ವಸತಿ ಇಲಾಖಾ ಅಧ್ಯಕ್ಸ ಶ್ರೀ ಅಬ್ದುಲ್ ಕಬೀರ್, ಮಹಿಳಾ ಸಬಲೀಕರಣ ಇಲಾಖಾ ಅಧ್ಯಕ್ಷೆ ಶ್ರೀಮತಿ ಸುಲೇಖಾ ಮಾಹಿನ್, ಕಾರ್ಯದರ್ಶಿ ಪ್ರೊ. ಸುಜಾತಾ ಶಿವ, ಮಾನವ ಸಂಪನ್ಮೂಲ ಇಲಾಖಾ ಕಾರ್ಯದರ್ಶಿ ಡಾ. ರಶ್ಮಿ ಪ್ರಕಾಶ್, ಆಡಳಿತ ವಿಭಾಗ ಕಾರ್ಯದರ್ಶಿ ಶ್ರೀಮತಿ ಎಂ ಭಾಲಾಮಣಿ, ವ್ಯಾಪಾರ ಮತ್ತು ವಾಣಿಜ್ಯ ಇಲಾಖಾ ಕಾರ್ಯದರ್ಶಿ ಶ್ರೀ ರವೀಂದ್ರನ್ ಕನ್ನಂಗಾಯಿ, ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿ ಶ್ರೀ ಹ್ಯಾರಿಸ್ ಖದೇರಿ, ಮತ್ತು ಕೃಷಿ ಇಲಾಖಾ ಕಾರ್ಯದರ್ಶಿ ಶ್ರೀ ದಯಾಕರ್ ಮಾಡ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮಕ್ಕೆ ಎಲ್ಲಾ ವಿಧ ಸಹಾಯ ಸಹಕಾರದೊಂದಿಗೆ ಸಂಘಟನಾ ಅಧ್ಯಕ್ಸ ಶ್ರೀ ಅಬ್ದುಲ್ ಸಲೀಂ ಸನಾ, ಮಾನವ ಸಂಪನ್ಮೂಲ ಇಲಾಖಾ ಅಧ್ಯಕ್ಸ ಡಾ. ಅಬ್ದುಲ್ ರಹಿಮಾನ್ ಮತ್ತು ಪ್ರವಾಸಿ ಪುನರ್ವಸತಿ ಇಲಾಖಾ ಕಾರ್ಯದರ್ಶಿ ಶ್ರೀ ಅಕ್ರಮ್ ಲಟ್ವಾನ್, ಐಟಿ ಇಲಾಖಾ ಕಾರ್ಯದರ್ಶಿ ಶ್ರೀ ಸದಕತುಲ್ಲಾರವರು ಶುಭ ಕೋರಿದರು.
















ಇನ್ನಷ್ಟು ಸುದ್ದಿಗಳು
ಎಸ್ ಎಸ್ ಎಫ್ ಕಾಸರಗೋಡು ಜಿಲ್ಲಾ ಸಾಹಿತ್ಯೋತ್ಸವ- ಕುಂಬಳೆ ಡಿವಿಷನ್ ಚಾಂಪಿಯನ್
ಕಾಸರಗೋಡು: ಕಾಲು ಜಾರಿ ಬಾವಿಗೆ ಬಿದ್ದು ಯುವಕ ಮೃತ್ಯು