janadhvani

Kannada Online News Paper

ನಿಮ್ಮ ಮಗಳ ಅಂತ್ಯಕ್ರಿಯೆಯನ್ನೂ ಇದೇ ರೀತಿ ಮಾಡ್ತೀರಾ?- ಹತ್ರಾಸ್ ಡಿಎಂ ಗೆ ಕೋರ್ಟ್ ತರಾಟೆ

ಲಕ್ನೋ, ಅ​.13: ಉತ್ತರಪ್ರದೇಶದ ಹತ್ರಾಸ್‌ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಉತ್ತರಪ್ರದೇಶ ಸರ್ಕಾರ ಈಗಾಗಲೇ ಈ ಪ್ರಕರಣದ ತನಿಖೆಗೆಯನ್ನು ಸಿಬಿಐಗೆ ವಹಿಸಿದೆ. ಆದರೆ, ಈ ಪ್ರಕರಣದಲ್ಲಿ ಹತ್ಯೆಯ ನಂತರ ಜಿಲ್ಲಾಡಳಿತ ಯುವತಿಯ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡದೆ ಅಮಾನವೀಯವಾಗಿ ತಾವೇ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ನಡೆಸಿದ್ದ ಘಟನೆ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಅಲಹಾಬಾದ್​ ಹೈಕೋರ್ಟ್​ನ ಲಕ್ನೋ ಪೀಠ ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಕ್ರಮವನ್ನು ಕಟುವಾಗಿ ಟೀಕಿಸಿದೆ. ಮೃತ ಸಂತ್ರಸ್ತೆಯ ಅಂತ್ಯಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದೆ. ಅಲ್ಲದೆ, ನಿಮ್ಮ ಸ್ವಂತ ಮಗಳ ಅಂತ್ಯಕ್ರಿಯೆಯನ್ನು ನೀವು ಹೀಗೆ ಮಾಡುತ್ತೀರಾ? ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದೆ.

ಕಳೆದ ವಾರ ನ್ಯಾಯಾಲಯವು ಈ ಪ್ರಕರಣ ಕುರಿತು ಸುಮೋಟೋ ಕೇಸ್ ದಾಖಲಿಸಿಕೊಂಡಿತ್ತು. ನಿನ್ನೆ ನಡೆದ ವಿಚಾರಣೆಯಲ್ಲಿ ಹತ್ರಾಸ್ ಸಂತ್ರಸ್ತ ಕುಟುಂಬ ನಮ್ಮ ಇಚ್ಛೆಗೆ ವಿರುದ್ಧವಾಗಿ ಶವ ಸಂಸ್ಕಾರ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ರಾತ್ರೋ ರಾತ್ರಿ ಶವವನ್ನು ಸುಟ್ಟುಹಾಕಲು ಅನುಮತಿ ನೀಡಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ರಾಜನ್ ರಾಯ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, “ಸಂತ್ರಸ್ತೆ ಶ್ರೀಮಂತ ಕುಟುಂಬದಿಂದ ಬಂದಿದ್ದರೆ ನೀವು ಆಕೆಯ ಮೃತದೇಹವನ್ನು ಇದೇ ರೀತಿ ಸುಟ್ಟುಹಾಕುತ್ತಿದ್ದಿರೇ.. ?” ಎಂದು ಕಟುವಾಗಿ ಟೀಕಿಸಿದೆ. ಪ್ರವೀಣ್ ಕುಮಾರ್ ಲಕ್ಷ್ಕರ್ ಮೃತ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಮಧ್ಯರಾತ್ರಿಯಲ್ಲಿ, ಯುವತಿಯ ಕುಟುಂಬ ಸದಸ್ಯರ ಉಪಸ್ಥಿತಿಯಿಲ್ಲದೆ ನಡೆಸಿದ ಶವಸಂಸ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಜೊತೆಗೆ “ನಿಮ್ಮ ಸ್ವಂತ ಮಗಳನ್ನು ಇದೇ ರೀತಿ ಅಂತ್ಯಸಂಸ್ಕಾರ ಮಾಡಲು ಅನುಮತಿ ನೀಡುತ್ತೀರಾ..?” ಎಂದು ನ್ಯಾಯಪೀಠ ಕುಮಾರ್ ಅವರನ್ನು ಪ್ರಶ್ನಿಸಿದೆ.

ಸಂತ್ರಸ್ತೆಯ ತಂದೆ ನ್ಯಾಯಾಲಯದ ಮುಂದೆ, “ನಿಮಗೆ ಮುಖ್ಯಮಂತ್ರಿಯ ನಿಧಿಯಿಂದ 25 ಲಕ್ಷ ರೂಪಾಯಿ ದೊರೆಯುತ್ತಿದೆ. ನಿಮ್ಮ ಮಗಳು ಕೊರೊನಾವೈರಸ್‌ನಿಂದ ಮೃತಪಟ್ಟಿದ್ದರೆ ನಿಮಗೆ ಇಷ್ಟು ಹಣ ಸಿಗುತ್ತಿತ್ತಾ..?” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅವಸರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂಬ ಹೇಳಿಕೆ ನ್ಯಾಯಪೀಠದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.

ಸಂತ್ರಸ್ತೆಯ ಕುಟುಂಬ ಮತ್ತು ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಕುಮಾರ್ ಅವಾಸ್ತಿ, ಪೊಲೀಸ್ ಮಹಾನಿರ್ದೇಶಕ ಹೆಚ್.ಸಿ.ಅವಾಸ್ತಿ, ಹೆಚ್ಚುವರಿ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮತ್ತು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ನ್ಯಾಯಾಲಯದಲ್ಲಿ ಹಾಜರಾಗಿದ್ದರು.ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಯ ಕಾನೂನು ಸಲಹೆಗಾರರೂ ಆಗಿದ್ದ ವಕೀಲೆ ಸೀಮಾ ಕುಶ್ವಾಹ ಅವರು ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಶಾಹಿ ಪ್ರತಿನಿಧಿಸುತ್ತಿದ್ದಾರೆ.

“ಕುಟುಂಬವು ಈ ಪ್ರಕರಣವನ್ನು ರಾಜ್ಯದಿಂದ ಹೊರಗೆ ದೆಹಲಿ ಅಥವಾ ಮುಂಬೈಗೆ ವರ್ಗಾಯಿಸಬೇಕೆಂದು ಬಯಸಿದೆ” ಎಂದು ಕುಟುಂಬ ಸದಸ್ಯರ ಸಲಹೆಗಾರರಾದ ಸೀಮಾ ಕುಶ್ವಾಹ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಉತ್ತರಗಳನ್ನು ಸಲ್ಲಿಸಲು ಸಾಕಷ್ಟು ಸಮಯ ಬೇಕು ಎಂದು ರಾಜ್ಯದ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ವಿಚಾರಣೆಯನ್ನು ನವೆಂಬರ್ 2 ಕ್ಕೆ ನಿಗದಿಪಡಿಸಲಾಗಿದೆ.

error: Content is protected !! Not allowed copy content from janadhvani.com